
ಫೆ.14 ರಂದು ಪುಸ್ತಕ ಪ್ರೇಮಿಗಳ ದಿನ
ಮಂಗಳೂರು: ಫೆ.14ರಂದು ಜಗತ್ತಿನೆಲ್ಲೆಡೆ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ದಿನಾಚರಣೆಯನ್ನು ಯುವ ಜೋಡಿಗಳು ಸಂಭ್ರಮಿಸುತ್ತಾರೆ. ಆದರೆ, ಮಂಗಳೂರಿನಲ್ಲಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಬೇಕೆಂಬ ಉದ್ದೇಶದಿಂದ ಫೆ.14 ಅನ್ನು ಪುಸ್ತಕ ಪ್ರೇಮಿಗಳ ದಿನವಾಗಿ ವಿನೂತನವಾಗಿ ಆಚರಿಸಲು ನಿರ್ಧರಿಸಿದೆ. ಇಡೀ ದಿನ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲು ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿ 10 ಕೃತಿಗಳು ಬಿಡುಗಡೆಗೊಳ್ಳಲಿವೆ.
ಆ ದಿನ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪುಸ್ತಕ ಪ್ರೇಮಿಗಳ ದಿನಾಚರಣೆ ನಡೆಯಲಿದೆ. ಲೇಖಕಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ’ಕಾತೀಶ್ವರ ವಚನಗಳು’, ಪ್ರೊ. ಅಕ್ಷಯ ಆರ್.ಶೆಟ್ಟಿ ಅವರ ’ಅವಳೆಂದರೆ ಬರಿ ಹೆಣ್ಣೆ’ ಕನ್ನಡ ಕಥೆಗಳು, ಪ್ರಕಾಶ್ ವಿ.ಎನ್. ಅವರ ’ನಮ್ಮವನು ಶ್ರೀ ರಾಮಚಂದ್ರ’ ಕನ್ನಡ ನಾಟಕ, ಡಾ.ವಿಶ್ವನಾಥ ಬದಿಕಾನ ಅವರ ’ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ’ ಸಂಶೋಧನಾ ಗ್ರಂಥ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ’ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ, ಅಕ್ಷತಾರಾಜ್ ಪೆರ್ಲ ಅವರ ’ನೆಲ ಉರುಳು’ ಕನ್ನಡ ನಾಟಕ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ’ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನ ಸಂಕಲನ, ಕರುಣಾಕರ ಬಳ್ಳೂರು ಅವರ ’ಬೆಳಕು’ ಕವನ ಸಂಕಲನ, ಡಾ.ಎಸ್.ಎಂ.ಶಿವಪ್ರಕಾಶ್ ಅವರ ’ಟೆಕ್ನಾಲಜಿ ವರ್ಸಸ್ ಎಕಾಲಜಿ’ ಮೀನುಗಳ ಕುರಿತ ಕನ್ನಡ ಮತ್ತು ಆಂಗ್ಲ ಭಾಷೆಯ ಮಿಶ್ರ ಕವನ ಸಂಕಲನ, ರಘು ಇಡ್ಕಿದು ಅವರ ’ಪೊನ್ನಂದಣ’ ಕೃತಿ ವಿಮರ್ಶೆ ಲೋಕಾರ್ಪಣೆಗೊಳ್ಳಲಿದೆ.
ಚಿತ್ರ ರಚನೆ ಸ್ಪರ್ಧೆ:
ಬೆಳಗ್ಗೆ 10ರಿಂದ 12 ಗಂಟೆವರೆಗೆ ಪುರಭವನದಲ್ಲಿ ಚಿತ್ರ ರಚನೆ ಸ್ಪರ್ಧೆಯೂ ನಡೆಯಲಿದೆ. 1-4ನೇ ತರಗತಿ ಮಕ್ಕಳಿಗೆ ’ಹಳ್ಳಿಯ ದೃಶ್ಯ’, 5-7ನೇ ತರಗತಿ ಮಕ್ಕಳಿಗೆ ’ಪುಸ್ತಕ ಮಾರಾಟದ ಜಾತ್ರೆ’, 8-10ನೇ ತರಗತಿ ಮಕ್ಕಳಿಗೆ ’ಪಾರ್ಕ್‌ನಲ್ಲಿ ಪುಸ್ತಕ ಓದುತ್ತಿರುವವರು’, ’ಪುಸ್ತಕ ಓದಿನ ಮಹತ್ವ’, ಸಾರ್ವಜನಿಕರ ಮುಕ್ತ ಅವಕಾಶ ವಿಭಾಗದಲ್ಲಿ ’ಮೊಬೈಲ್ ವರ್ಸಸ್ ಪುಸ್ತಕ’, ’ಪುಸ್ತಕ ಪ್ರೇಮ’ ವಿಷಯ ನೀಡಲಾಗಿದೆ ಎಂದು ಪ್ರತಿಷ್ಠಾನದ ಶಶಿರಾಜ್ ಕಾವೂರು ತಿಳಿಸಿದ್ದಾರೆ.