
ಸಮಾಜಮುಖಿ ಕೆಲಸಗಳಿಗೆ ಮಹಿಳೆಯರು ಮುಂದಾಗಬೇಕು: ಯು.ಟಿ. ಖಾದರ್
ಮಂಗಳೂರು: ಸಂಘಟನೆಗಳನ್ನು ಸ್ಥಾಪಿಸುವುದು ಸುಲಭ. ಆದರೆ ಅದನ್ನು ನಿರ್ವಹಿಸಿಕೊಂಡು ಹೋಗುವುದು ಕಷ್ಟದಾಯಕ. ಹಾಗಾಗಿ ಯಾವ ವ್ಯಕ್ತಿಗೆ ಯಾವತ್ತೂ ಕೂಡ ಹುದ್ದೆ ಮುಖ್ಯ ಆಗಬಾರದು. ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡುವುದೇ ಮುಖ್ಯ ಗುರಿಯಾಗಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಆಶ್ರಯದಲ್ಲಿ ನಗರದ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾರಿ ಮಹಿಳಾ ಸಮಾವೇಶದಲ್ಲಿ ನೂತನ ಮಹಿಳಾ ಘಟಕದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಧಾರ್ಮಿಕ ಹಾಗೂ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಗಾಗಿ ಮಹಿಳಾ ಘಟಕದ ಅಗತ್ಯ ಇದೆ. ಸಮಾಜದಲ್ಲಿ ಶೇ.50ರಷ್ಟು ಮಹಿಳೆಯರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಆಗುತ್ತದೆ. ಇದರಿಂದ ಮಹಿಳಾ ಸಮಾಜದ ಬೆಳವಣಿಗೆ ಸಾಧ್ಯವಿದೆ.ನೂತನ ಬ್ಯಾರಿ ಮಹಿಳಾ ಘಟಕದ ಕಾರ್ಯಚಟುವಟಿಕೆಯು ಎಲ್ಲಾ ವರ್ಗದ ಜನರು ಗೌರವಿಸು ವಂತಹ ರೀತಿಯಲ್ಲಿ ಇರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ನಾಯಕತ್ವ ಗುಣ ಬರುತ್ತದೆ. ಒಂದು ಹೆಣ್ಣು ಮನೆಯಲ್ಲಿದ್ದರೆ ಆಕೆ, ತಂದೆ ತಾಯಿಗೆ ನೆರವಾ ಗುತ್ತಾಳೆ. ಕುಟುಂಬದಲ್ಲಿ ತನಗಿಂತ ಕಿರಿಯರ ಹೊಣೆ ಹೊತ್ತುಕೊಳ್ಳುತ್ತಾರೆ. ಹೀಗೆ ನಾನಾ ಸವಾಲುಗಳ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಮಹಿಳೆಯರಿಗೆ ಇದೆ. ಅವರನ್ನು ಪ್ರೋತ್ಸಾಹಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದ ಅವರು, ಮಹಿಳಾ ಘಟಕ ಸಮರ್ಪಕವಾಗಿ ಕೆಲಸ ಮಾಡಬೇಕು. ಕುಟುಂಬದ ನಿರ್ವಹಣೆಯ ಜೊತೆಗೆ ಸಮಾಜಮುಖಿ ಕೆಲಸ ಮಾಡಲು ಮಹಿಳೆಯರು ಮುಂದಾಗಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ನಾಯಕತ್ವದ ಗುಣವನ್ನು ಸದುಪಯೋಗಿಸಿಕೊಂಡಾಗ ಮಹಿಳಾ ಘಟಕಗಳು ಕ್ರಿಯಾಶೀಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಉದ್ಘಾಟಿಸಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲೀದ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಸೂರಲ್ಪಾಡಿ, ಟಿ.ಎಂ. ಶಹೀದ್ ಸುಳ್ಯ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಮಾತನಾಡಿದರು. ಅನುಪಮ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಬ್ಯಾರಿ ಮಹಿಳಾ ಕವಿಗೋಷ್ಠಿ, ಸಂವಾದ ಕಾರ್ಯಕ್ರಮ ನಡೆಯಿತು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮೀಝ ಎಂ.ಬಿ. ವರದಿ ವಾಚಿಸಿದರು.
ನೂತನ ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಹಪ್ಸಾಬಾನು ಬೆಂಗಳೂರು, ಅಧ್ಯಕ್ಷರಾಗಿ ಶಮೀಮಾ ಕುತ್ತಾರ್, ಉಪಾಧ್ಯಕ್ಷರಾಗಿ ಆಯಿಶಾ ಕಲ್ಲಾಪು, ಅಸ್ಮತ್ ವಗ್ಗ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ ಎಂ.ಬಿ., ಕಾರ್ಯದರ್ಶಿ ಯಾಗಿ ಸಾರಾ ಮಸ್ಕುರಿನಿಸಾ, ಆಶಿಕಾ ಇಬ್ರಾಹಿಂ, ಕೋಶಾಧಿಕಾರಿಯಾಗಿ ಸೌಧಾ ಹಾಗೂ ಎಂಟು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದಗ್ರಹಣ ಪಡೆದರು.
ಕಾರ್ಯಕ್ರಮದಲ್ಲಿ ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಪರಿಷತ್ ಸದಸ್ಯರಾದ ಅಬ್ದುಲ್ ಖಾದರ್ ಇಡ್ಮಾ, ಎಂ.ಎಚ್.ಮೊಯ್ದೀನ್, ಡಾ. ಸಿದ್ದೀಕ್ ಅಡ್ಡೂರು, ಆಲಿಯಬ್ಬ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ರೈಹಾನ ವಿ.ಕೆ. ಸಚ್ಚರಿಪೇಟೆ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮ ನಿರ್ವಹಿಸಿದರು.