
ಮೀನುಗಾರರ ಸಮಸ್ಯೆ: ಸಿಎಂ ಭೇಟಿ
ಮಂಗಳೂರು: ರಾಜ್ಯ ಸರಕಾರದ ಮುಂಬರುವ ಬಜೆಟ್‌ನಲ್ಲಿ ರಾಜ್ಯದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿ, ಮೀನುಗಾರರ ಸಮಸ್ಯೆ ಪರಿಹಾರ ಸೇರಿದಂತೆ ಅಗತ್ಯ ಕ್ರಮಗಳಿಗೆ ಸೂಕ್ತ ಅನುದಾನ ಒದಗಿಸಲು ಒತ್ತಾಯಿಸಿ ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮೀನುಗಾರ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ರಾಜ್ಯದಲ್ಲಿ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕರಾವಳಿಯ ಮೀನುಗಾರರ ಸಮಸ್ಯೆ ಗಳನ್ನು ಬಗೆಹರಿಸಲು ಅಗತ್ಯ ಕ್ರಮ ವಹಿಸಬೇಕು. ಮಂಗಳೂರು ಹಳೆ ಬಂದರು ಸಮಗ್ರ ಅಭಿವೃದ್ಧಿ, ಹೂಳೆತ್ತುವುದು ಹಾಗೂ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಮೀನುಗಾರ ಮುಖಂಡರು ಭೇಟಿಯ ಸಂದರ್ಭ ಮುಖ್ಯಮಂತ್ರಿ ಗಮನ ಸೆಳೆದಿದ್ದಾರೆ. ಮಂಡಿನೋವಿನ ಹೊರತಾಗಿಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೀನುಗಾರ ಮುಖಂಡರ ಭೇಟಿಗೆ ಅನುಮತಿ ನೀಡಿ, ಬೇಡಿಕೆಗಳನ್ನು ಆಲಿಸಿದ್ದಾರೆ ಎಂದು ಮೀನುಗಾರ ಮುಖಂಡ ಚೇತನ್ ಬೆಂಗ್ರೆ ತಿಳಿಸಿದ್ದಾರೆ.
ನಿಯೋಗದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಸಮಿತಿಯ ಸಂಚಾಲಕ ಪ್ರಸಾದ್ ರಾಜ್ ಕಾಂಚನ್, ಮುಖಂಡರಾದ ಮೋಹನ್ ಬೆಂಗ್ರೆ, ಇಬ್ರಾಹೀಂ ಬೆಂಗ್ರೆ, ಮನೋಹರ್ ಬೋಳಾರ್, ರಾಜೇಶ್ ಪುತ್ರನ್ ಉಳ್ಳಾಲ, ಜಯ ಸಿ. ಕೋಟ್ಯಾನ್, ಸೋಮನಾಥ ಕಾಂಚನ್, ವಿನಯ್ ಕರ್ಕೇರ, ಕಿಶೋರ್ ಮಲ್ಪೆ, ದಯಾನಂದ ಸುವರ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.