
ಮಂಗಳೂರು ನಗರ ಪಾಲಿಕೆ: 180.70 ಕೋಟಿ ಮಿಗತೆ ಬಜೆಟ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಆರಂಭಿಕ ಶಿಲ್ಕು 325.78 ಕೋಟಿ ರು. ಆಗಿದೆ. ಮುಂದಿನ ಸಾಲಿನಲ್ಲಿ 741.25 ಕೋಟಿ ರು. ಆದಾಯ ಹಾಗೂ 886.33 ಕೋಟಿ ರು. ವೆಚ್ಚ ನಿರೀಕ್ಷಿಸಲಾಗಿದ್ದು, 180.70 ಕೋಟಿ ರು.ಗಳ ಉಳಿಕೆ ಕಾಣಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್ ಮಂಡಿಸಿದರು.
ಜನಸ್ನೇಹಿ ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ, ಆದಾಯ ಮೂಲಗಳನ್ನು ಗುರುತಿಸಿ ರಾಜಸ್ವ ಕ್ರೋಢೀಕರಣಕ್ಕೆ ಒಳಪಡಿಸುವುದು, ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು, ಪ್ರಗತಿಯಲ್ಲಿರುವ ಕಾಮಗಾರಿಗಳ ಪೂರ್ಣಗೊಳಿಸಲು ಆದ್ಯತೆ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ನಾಗರಿಕರ ಅಭಿವೃದ್ಧಿಗೆ ವಿಶೇಷ ಕಲ್ಯಾಣ ಕಾರ್ಯಕ್ರಮಗಳ ದೃಷ್ಟಿಕೋನವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ 930 ಕೋಟಿ ರು.ಗಳಲ್ಲಿ ಒಟ್ಟು 57 ಕಾಮಗಾರಿ ಮತ್ತು 4 ಪಿಪಿಪಿ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ 39 ಯೋಜನೆ ಪೂರ್ಣಗೊಂಡಿದೆ. 8 ಕಾಮಗಾರಿ ಪ್ರಗತಿಯಲ್ಲಿದೆ. 10 ಯೋಜನೆಗಳಿಗೆ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ. ಈವರೆಗೆ 916 ಕೋಟಿ ರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ. ಉಳಿದ 73.50 ಕೋಟಿ ರು.ಗೆ ಅನುಮೋದನೆ ಸಿಕ್ಕಿದ್ದು, ಸ್ಮಾರ್ಟ್ಸಿಟಿ ಕಂಪನಿಗೆ ಪಾವತಿಯಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.
ಆಡಳಿತ ಸುಧಾರಣೆ..
ಪಾಲಿಕೆಯ ಕಾಯಂ ನೌಕರರಿಗೆ ಜೆಪ್ಪುವಿನಲ್ಲಿ ನೂತನ ವಸತಿ ನಿರ್ಮಿಸಲಾಗಿದ್ದು, ಸಿಬ್ಬಂದಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಜಿ೪ ಕೆಟಗರಿಗೆ ಮಂಜೂರಾತಿ ಸಿಕ್ಕಿದ್ದು, ಈ ಸಾಲಿನಲ್ಲಿ ಕಾರ್ಯಗತಗೊಳ್ಳಲಿದೆ. ಕಳೆದ ಸಾಲಿನಲ್ಲಿ ಸಿಬ್ಬಂದಿ ಆರೋಗ್ಯ ಸಿರಿ ಯೋಜನೆಯ ಸಿಬ್ಬಂದಿ ಕುಟುಂಬ ಮಿತ್ರ ಯೋಜನೆಯನ್ನು ಈ ಸಾಲಿನಲ್ಲೂ ವಿಸ್ತರಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯ್ತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿಭಾಗ ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆ ಪ್ರಕರಣಗಳನ್ನು ಪತ್ತೆಹಚ್ಚುವ ಮೂಲಕ ತೆರಿಗೆ ಮತ್ತು ತೆರಿಗೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಳವಡಿಸಲು ತಂಡ ರಚಿಸಿ ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಸಲು ಉದ್ದೇಶಿಸಲಾಗಿದೆ. ಆಯ್ದ ರಸ್ತೆ ಜಂಕ್ಷನ್‌ಗಳಲ್ಲಿ ಪಿಂಕ್ ಮಾದರಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.
ವಿಶೇಷ ಕಾರ್ಯಕ್ರಮ...
ಈ ಬಾರಿಯ ಬಜೆಟ್‌ನಲ್ಲಿ ಆರು ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.
ಸಶಕ್ತ ಮಹಿಳೆ-ಆರೋಗ್ಯ ಸಂರಕ್ಷಣೆ ಕಾರ್ಯಕ್ರಮದಲ್ಲಿ ಗರ್ಭ ಕಂಠದ ಕ್ಯಾನ್ಸರ್ ಹತೋಟಿಗೆ 3 ಲಕ್ಷ ರು. ಆದಾಯ ಮಿತಿಯಲ್ಲಿರುವ 11ರಿಂದ 14 ವರ್ಷದೊಳಗಿನ ಹೆಣ್ಮಕ್ಕಳಿಗೆ ಎಚ್ಪಿವಿ ಲಸಿಕೆ ಸಲುವಾಗಿ 25 ಲಕ್ಷ ರು. ಕಾದಿರಿಕೆ. ಅಟಲ್ ವಿದ್ಯಾನಿಧಿ ಯೋಜನೆಯಡಿ 1ರಿಂದ 10ನೇ ತರಗತಿ ವರೆಗೆ ಶಾಲಾ ಶುಲ್ಕ ಸೂಕ್ತ
ಸಮಯದಲ್ಲಿ ಪಾವತಿಸಲು ಅಸಾಧ್ಯವಾದ ಪೋಷಕರಿಗೆ 2 ವರ್ಷದೊಳಗೆ ಮರು ಪಾವತಿಸುವ ಷರತ್ತಿನಲ್ಲಿ ಬಡ್ಡಿ ರಹಿತ ಸಾಲ ಯೋಜನೆ. 5 ಲಕ್ಷ ರು. ವಾರ್ಷಿಕ ಆದಾಯದ ಮಿತಿಯ
ವಿದ್ಯಾರ್ಥಿಗಳಿಗಾಗಿ 5 ಕೋಟಿ ರು. ನಿಗದಿ. ಈ ಯೋಜನೆಯನ್ನು ಗರಿಷ್ಠ ಸಂಖ್ಯೆ ವಿದ್ಯಾರ್ಥಿಗಳಿಗೆ ದೊರಕಿಸಲು ಎನ್‌ಜಿಒ ಹಾಗೂ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಅನುದಾನಕ್ಕೂ ಕ್ರಮ.
ಸ್ಟೀಲ್ ಬ್ಯಾಂಕ್ ಯೋಜನೆಯಡಿ ಪ್ಲಾಸ್ಟಿಕ್ ಮುಕ್ತ ಮಾಡಿ ಸ್ಟೀಲ್ ಪಾತ್ರೆ ಒದಗಿಸಲು 20 ಲಕ್ಷ ರು. ಪಾಲಿಕೆಯಿಂದ ಬಾಡಿಗೆ ರಹಿತವಾಗಿ ಮರುಪಾವತಿ ಠೇವಣಿ ನೀಡಿ ಈ ಯೋಜನೆಯ ಸದುಪಯೋಗ ಪಡೆಯಬಹುದು.
ಪಾಲಿಕೆ ಸದಸ್ಯರಿಗೆ ಆರೋಗ್ಯ ಮಿತ್ರ ಯೋಜನೆಯಡಿ ಎಲ್ಲ 60 ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲು 10 ಲಕ್ಷ ರು. ಕಾದಿರಿಸಲಾಗಿದೆ. ಕೃಷಿ ಮಿತ್ರ ಯೋಜನೆಯಲ್ಲಿ ಕೃಷಿ ಬಗ್ಗೆ ಉಚಿತ ತರಬೇತಿಯನ್ನು ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ನೀಡುವ ಬಗ್ಗೆ ಎನ್ಜಿಒಗಳಿಗೆ ಪ್ರೋತ್ಸಾಹಿಸಲು 3 ಲಕ್ಷ ರು. ನಿಗದಿಪಡಿಸಲಾಗಿದೆ.
ಕದ್ರಿಯಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣವಾಗಲಿದ್ದು, ಪಿಪಿ ಅಥವಾ ಸರ್ಕಾರದ ವಿಶೇಷ 10 ಕೋಟಿ ರು. ಅನುದಾನದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. -ಮಂಗಳೂರು ಪಾಲಿಕೆ ಜುಲೈ 3, 1980ರಂದು ಅಸ್ತಿತ್ವಕ್ಕೆ ಬಂದ ನೆನಪಲ್ಲಿ ಪಾಲಿಕೆಡ್ ಒಂಜಿ ದಿನ ಕಾರ್ಯಕ್ರಮಕ್ಕೆ 20 ಲಕ್ಷ ರು. ಕಾದಿರಿಸಲಾಗಿದೆ.
ಉಪ ಮೇಯರ್ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.