.jpeg)
2025ರ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್: ಸತೀಶ್ ಕುಂಪಲ
ಮಂಗಳೂರು: ಕೇಂದ್ರ ಸರಕಾರದ 2025ರ ಬಜೆಟ್ ಐತಿಹಾಸಿಕವಾದುದು. ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿ ಅನೇಕ ವಿಧದ ಸವಲತ್ತುಗಳನ್ನು ಕೇಂದ್ರ ಬಜೆಟ್‌ನಲ್ಲಿ ಒದಗಿಸುವ ಮೂಲಕ ಅವರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲಾಗಿದೆ. ಎಲ್ಲ ವರ್ಗದ ಜನತೆಗೆ ಬಜೆಟ್‌ನಲ್ಲಿ ಪ್ರೋತ್ಸಾಹ ನೀಡಲಾಗಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ಬಜೆಟ್ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸೌಲಭ್ಯಗಳನ್ನು ನೀಡುವ ಮೂಲಕ ಜನಸಾಮಾನ್ಯರ ಹೊರೆ ಇಳಿಸಿದೆ. ಇದು ಅತ್ಯಂತ ಒಳ್ಳೆಯ ಬಜೆಟ್ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ವಾರ್ಷಿಕ 12 ಲಕ್ಷ ರೂ. ತನಕದ ಆದಾಯಕ್ಕೆ ಆದಾಯ ತೆರಿಗೆಯಿಂದ ಮುಕ್ತಿ ನೀಡಿದ ಐತಿಹಾಸಿಕ ನಿರ್ಣಯವು ಜನ ಸಾಮಾನ್ಯ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರದ ಭರ್ಜರಿ ಗಿಫ್ಟ್ ಆಗಿದೆ. ಇದರಿಂದ 10 ಕೋಟಿ ಜನರಿಗೆ ಲಾಭವಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಯ ಪರಿಣಾಮ ಸರಕಾರಿ ಶಾಲೆಗೆಳಿಗೆ ಕಂಪ್ಯೂಟರ್, 3ಡಿ ಪ್ರಿಂಟರ್ಸ್, ವಿದ್ಯಾರ್ಥಿಗಳಿಗೆ ಅನ್ವೇಷಣೆ ಮಾಡಲು ಅವಕಾಶ, ಇಲೆಕ್ಟ್ರಾನಿಕ್ ಕಿಟ್ ಮುಂತಾದವುಗಳನ್ನು ಕೇಂದ್ರ ಸರಕಾರ ಒದಗಿಸಲಿದೆ. ವಿಮಾ ಕ್ಷೇತ್ರದಲ್ಲಿ ವಿದೇಶೀ ಹೂಡಿಕೆ ಮಿತಿಯನ್ನು ಶೇ. 74ರಿಂದಂದ ಶೇ. 100ಕ್ಕೆ ಏರಿಕೆ ಮಾಡಿರುವುದರಿಂದಾಗಿ ಹೊಸ ಉದ್ಯೋಗ ಸೃಷ್ಟಿ, ಇನ್ಸೂರೆನ್ಸ್ ಪ್ರೀಮಿಯಂ ಕಡಿಮೆಯಲ್ಲಿ ಲಭ್ಯ ಆಗಲಿದೆ. ಮುಂದಿನ 5 ವರ್ಷಗಳಲ್ಲಿ 75000 ವೈದ್ಯಕೀಯ ಸೀಟುಗಳ ಏರಿಕೆಯಿಂದ ವೈದ್ಯಕೀಯ ವಿದ್ಯಾರ್ಹತೆ ಪಡೆದು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮುಂದಿನ 3 ವರ್ಷಗಳಲ್ಲಿ 300 ಕ್ಯಾನ್ಸರ್ ತಪಾಸಣಾ ಕೇಂದ್ರಗಳ ಸ್ಥಾಪನೆಯ ಯೋಜನೆಯಿಂದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದು ಕೃಷಿಕರಿಗೆ ವರದಾನವಾಗಲಿದೆ. ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಹೂಡಿಕೆಯಿಂದಾಗಿ ಜಲ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆಯಾಗಲಿದೆ. ಕೇಂದ್ರ ಸರಕಾರವು ರಾಜ್ಯಗಳಿಗೆ 1.5 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ನೀಡುವುದು ಸ್ವಾಗತಾರ್ಹ. ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಉಪಯೋಗ ಆಗಲಿದೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಉದ್ಯಮಿಯಾಗಿ ಬೆಳೆಯಲು ಸಹಕಾರಿಯಾಗುವಂತೆ 2 ಕೋಟಿ ಸಾಲ ಯೋಜನೆ, ಮೀನುಗಾರಿಕೆಗೆ 60 ಸಾವಿರ ಕೋಟಿ ರೂ., ಕ್ಯಾನ್ಸರ್ ಔಷಧ ಸುಂಕ ರದ್ದು, ಬೀದಿಬದಿ ವ್ಯಾಪಾರಿಗಳಿಗೆ 30 ಸಾವಿರ ರೂ. ಸಾಲ ಹೀಗೆ ಅನೇಕ ಹೊಸತನಗಳಿಂದ ಹಾಗೂ ಜನಸ್ನೇಹಿಯಾದ ಬಜೆಟ್‌ನ್ನು ನರೇಂದ್ರ ಮೋದಿ ಸರಕಾರ ನೀಡಿದೆ ಎಂದು ವಿವರಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಕ್ತಾರ ಅರುಣ್ ಶೇಟ್, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಸಿದ್ದತೆ ಆರಂಭಿಸಿದೆ. ಈ ಬಗ್ಗೆ ಈಗಾಗಲೇ ಪ್ರಮುಖರ ಸಭೆ ಕರೆಯಲಾಗಿದೆ. ಮನಪಾ ಚುನಾವಣೆಗೆ ಸಂಬಂಧಿಸಿ ವಾರದೊಳಗೆ ಜನಪ್ರತಿನಿಧಿಗಳು ಹಾಗೂ ಹಿರಿಯರ ಸಭೆ ನಡೆಸಲಾಗುವುದು. ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ ಹಾಗೂ ಪ್ರಸ್ತುತ ನಡೆಯುತ್ತಿರುವ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಬಹುಪಾಲು ಸ್ಥಾನಗಳನ್ನು ಗೆದ್ದಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಜಿ.ಪಂ., ತಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಕ್ಷದ ಜಿಲ್ಲಾ ಸಮಿತಿ ಹಾಗೂ ಮಂಡಲ ಸಮಿತಿ ಪುನರ್ ರಚನೆ ಆಗಲಿದೆ ಎಂದು ಸತೀಶ ಕುಂಪಲ ಪ್ರತಿಕ್ರಿಯಿಸಿದರು.