
ಎಂ.ಆರ್.ಪಿ.ಎಲ್. ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-2025ನ್ನು ಉದ್ಘಾಟಿಸಿದ ಶಾಸಕ ಕಾಮತ್
Saturday, February 8, 2025
ಮಂಗಳೂರು: ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ನೇತೃತ್ವದಲ್ಲಿ ನಡೆಯುತ್ತಿರುವ ಎಂ.ಆರ್.ಪಿ.ಎಲ್. ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-2025 ರ ಉದ್ಘಾಟನೆಯನ್ನು ಹಲವು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಇಂದಿನ ಈ ಸ್ಪರ್ಧಾಕೂಟದಲ್ಲಿ ಜಿಲ್ಲೆಯ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿರುವುದು ದಾಖಲೆಯಾಗಿದೆ. ಇಲ್ಲಿನ ಬ್ಯಾಡ್ಮಿಂಟನ್ ಅಂಕಣದ ಮೇಲ್ಛಾವಣಿ ದುರಸ್ತಿಗಾಗಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಲ್ಲದೇ ಬ್ಯಾಡ್ಮಿಂಟನ್ ಹಾಗೂ ಕಬಡ್ಡಿಗೆ ವಿಶೇಷ ಆದ್ಯತೆ ನೀಡಲು ಉರ್ವ ಪರಿಸರದಲ್ಲಿ ಸುಸಜ್ಜಿತ ಅಂಕಣಕ್ಕೆ ಅಂದೇ ಶಿಲಾನ್ಯಾಸ ನಡೆಸಲಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಅದು ಕೂಡಾ ಲೋಕಾರ್ಪಣೆಯಾಗಲಿದೆ. ಆ ನಂತರ ಇಲ್ಲಿ ಜಿಲ್ಲಾಮಟ್ಟ ಮಾತ್ರವಲ್ಲ, ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧಾಕೂಟವೂ ನಡೆಯಲಿದೆ. ಡಿಕೆಡಿಬಿಎ ಎಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ಸಹ ಇನ್ನೂ ಅತ್ಯುತ್ತಮವಾಗಿ ಕಾರ್ಯ ಚಟುವಟಿಕೆಗಳು ನಡೆಯಲಿದ್ದು ವಿವಿಧ ಸಂಸ್ಥೆಗಳ, ಸರ್ಕಾರದ ವಿಶೇಷ ನೆರವು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಎಂಆರ್‌ಪಿಎಲ್, ಎಸ್‌ಸಿಡಿಸಿಸಿ ಬ್ಯಾಂಕ್ ಸೇರಿದಂತೆ ಅನೇಕರ ಸಹಕಾರದಿಂದ ಬಹಳ ಯಶಸ್ವಿಯಾಗಿ ಈ ಕ್ರೀಡಾಕೂಟವು ಆಯೋಜನೆಯಾಗುತ್ತಿದೆ. ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇ ಒಂದು ಬ್ಯಾಡ್ಮಿಂಟನ್ ಅಂಕಣವಿತ್ತು. ಇದೀಗ ಶಾಸಕರ ವಿಶೇಷ ಮುತುವರ್ಜಿಯಿಂದ ಉರ್ವ ಪರಿಸರದಲ್ಲಿ ಸುಸಜ್ಜಿತ ಬ್ಯಾಡ್ಮಿಂಟನ್ ಅಂಕಣವು ನಿರ್ಮಾಣಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳಿಗೆ ಈ ಅಂಕಣವು ವೇದಿಕೆಯಾಗಲಿದೆ ಎಂದು ಉಪಮೇಯರ್ ಭಾನುಮತಿ ಹೇಳಿದರು.
ಎಂಆರ್‌ಪಿಎಲ್ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಮುಖರು ಉಪಸ್ಥಿತರಿದ್ದರು.