
ಕಾಪು ಶ್ರೀ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಫೆ.23ರಂದು ನವೋದಯ ಹಾಗೂ ಸಹಕಾರಿ ಬಂಧುಗಳಿಂದ ಹೊರೆಕಾಣಿಕೆ ಸಮರ್ಪಣೆ
ಮಂಗಳೂರು: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಂದ ದೊಡ್ಡ ಪ್ರಮಾಣದಲ್ಲಿ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಫೆ.23 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘ/ ಸಂಸ್ಥೆಗಳ ಸಮಸ್ತ ಸಹಕಾರಿ ಬಂಧುಗಳು ಸಮರ್ಪಿಸುವ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆಯನ್ನು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಲಿರುವರು.
ಪಾಂಗಾಳ ರಾಷ್ಟ್ರೀಯ ಹೆದ್ದಾರಿಯ ಬಳಿಯಿಂದ ಹೊರಡುವ ಹೊರೆಕಾಣಿಕೆ ಸಮರ್ಪಣೆ ಮೆರೆವಣಿಗೆಯಲ್ಲಿ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಉಭಯ ಜಿಲ್ಲೆಗಳ ಸಹಕಾರಿ ಬಂಧುಗಳು ಸೇರಿದಂತೆ ಸುಮಾರು 10,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿರುವರು ಎಂದು ಹೊರೆಕಾಣಿಕೆ ಸಮರ್ಪಣಾ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.