
ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ಲೈನ್ ಮೇಲೆ ಮರ ಉರುಳಿಸಿದ ಕಾಡಾನೆ
Saturday, February 15, 2025
ಉಜಿರೆ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಉಜಿರೆ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು ಮರವೊಂದನ್ನು ವಿದ್ಯುತ್ ಲೈನಿನ ಮೇಲೆ ಉರುಳಿಸಿದ ಘಟನೆ ಶನಿವಾರ ಬೆಳಗ್ಗಿನ ಜಾವ ಸಂಭವಿದೆ.
ಬೊಳಿಯಾರು ಸಮೀಪ ರಸ್ತೆಬದಿಯಲ್ಲಿದ್ದ ಮರವನ್ನು ಕಾಡಾನೆ ನೆಲಕ್ಕೆ ಉರುಳಿಸಿದೆ. ಮರ ಧರ್ಮಸ್ಥಳ-ಶಿಶಿಲ 11 ಕೆ.ವಿ ವಿದ್ಯುತ್ ಲೈನಿನ ಮೇಲೆ ಬಿದ್ದಿದ್ದು ವಿದ್ಯುತ್ ಲೈನ್ ತುಂಡಾಗಿದೆ. ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಇದರ ಸಮೀಪವೇ ಹಾದು ಹೋಗುವ ಸ್ಥಳೀಯ ಸಂಪರ್ಕ ನೀಡುವ ವಿದ್ಯುತ್ ಲೈನಿಗೂ ಹಾನಿ ಸಂಭವಿಸಿದೆ. ಮೆಸ್ಕಾಂ ಇಲಾಖೆಯವರು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವು ಗೊಳಿಸುವ ಕಾರ್ಯ ಮಾಡಿದ್ದು ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸುವ ಕಾಮಗಾರಿ ನಡೆಸುತ್ತಿದ್ದಾರೆ.
ಪರಿಸರದಲ್ಲಿ ಕಾಡಾನೆಗಳು ಆಗಾಗ ಓಡಾಟ ನಡೆಸುತ್ತಿದ್ದು ಹಿಂದೆ ಇಲ್ಲಿಯೇ ವಾಹನಗಳ ಮೇಲೆ ದಾಳಿ ನಡೆಸಿತ್ತು. ಧರ್ಮಸ್ಥಳ ಗ್ರಾಮದ ನೇರ್ತನೆ, ಬೊಳಿಯಾರು, ಮುಳಿಕಾರು ಪರಿಸರದಲ್ಲಿ ಆಗಾಗ ಕಾಡಾನೆಗಳು ದಾಳಿ ನಡೆಸಿ ಕೃಷಿಗೆ ವ್ಯಾಪಕ ಹಾನಿಯುಂಟುಮಾಡುತ್ತಿದೆ.