
ಫೆ.28 ರಂದು ವಿಜ್ಞಾನ ಮೇಳ
ಮಂಗಳೂರು: ನಗರದ ರೋಮನ್ ಮತ್ತು ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆ ವತಿಯಿಂದ ವಿಷನ್ ಎಂಪವರ್ ಬೆಂಗಳೂರು ಸಹಯೋಗದಲ್ಲಿ ಫೆ.28 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ಕೋಟೆಕಣಿಯಲ್ಲಿರುವ ಶಾಲಾ ಆವರಣದಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿದೆ.
ಈ ಮೇಳದಲ್ಲಿ ಶಾಲೆಯ ಅಂಧ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದು, ವಿವಿಧ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಮೇಳದಲ್ಲಿ ಕೆನರ ಶಾಲೆ ಉರ್ವದ ಸುಮಾರು 20 ಮಂದು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಅಂಧ ವಿದ್ಯಾರ್ಥಿಗಳ ಜೊತೆ ಬೆರೆತು ಅವರು ಸಂವಹನ ಮಾಡಲಿದ್ದಾರೆ ಎಂದು ರೋಮನ್ ಮತ್ತು ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ಶಾಲೆಯ ಪ್ರಾಂಶುಪಾಲ ಕ್ಯಾಲಿಸ್ಟಸ್ ಡೇಸ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ ಬ್ರೈಲ್ ಲಿಪಿ, ಸೋಲಾರ್ ಸಿಸ್ಟಮ್, ಚಂದ್ರಯಾನ ಮುಂತಾದ ಪ್ರಾತ್ಯಕ್ಷಿಕೆ ಪ್ರದರ್ಶನ ಇರಲಿದೆ. ಅಂಧ ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರ ಸಹಾಯದಿಂದ ತಯಾರಿಸಿದ ಪ್ರಾತ್ಯಕ್ಷಿಕೆಯೂ ಗಮನಸೆಳೆಯಲಿದೆ ಎಂದು ಹೇಳಿದರು.
ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಕೇತನ್ ಚಂದ್ರನ, ಕೇತನ್ ವಾಸನಿ ಉಪಸ್ಥಿತರಿದ್ದರು.