
ಕೋಟೆಕಾರ್ ದರೋಡೆ ಪ್ರಕರಣ: ಮಾಸ್ಟರ್ ಮೈಂಡ್ ಸೆರೆ
ಮಂಗಳೂರು: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ. ಸಿ. ರೋಡ್ ಶಾಖೆಯಲ್ಲಿ ಜ. 18ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮಾಸ್ಟರ್ ಮೈಂಡ್, ಪ್ರಮುಖ ಆರೋಪಿ ಕನ್ಯಾನದ ಬಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ (69) ಎಂಬಾತನನ್ನು ಬೆಂಗಳೂರಿನ ರೈಲ್ವೇ ಸ್ಟೇಷನ್ ಬಳಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೇವರ್‌ನನ್ನು ವಿಚಾರಿಸಿದಾಗ ಆತನು ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಕೆ.ಸಿ. ರೋಡ್‌ನ ಮಹಮ್ಮದ್ ನಝೀರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ಕೃತ್ಯವೆಸಗಲು ಸುಮಾರು ಆರು ತಿಂಗಳಿನಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ.
ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇರೆಗೆ ಡಕಾಯತಿ ಕೃತ್ಯದ ಸ್ಥಳೀಯ ವ್ಯಕ್ತಿ ಮಹಮ್ಮದ್ ನಝೀರ್‌ನನ್ನು ಕೂಡ ಬಂಧಿಸಲಾಗಿದೆ. ಈತ ಬಾಸ್ಕರ್ ಬೆಳ್ಚಪಾಡನೊಂದಿಗೆ ಸಂಚಿನಲ್ಲಿ ಪಾಲ್ಗೊಂಡಿದ್ದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡವನ್ನು ಆರೋಪಿಗಳಿಗೆ ತೋರಿಸಿಕೊಟ್ಟು ಡಕಾಯತಿ ನಡೆಸಬೇಕಾದ ದಿನ, ವೇಳೆ ಹಾಗೂ ಸೊಸೈಟಿಯಲ್ಲಿರುವ ಸಿಬ್ಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಸ್ಥಳೀಯ ಮಾಹಿತಿಯನ್ನು ತಿಳಿಸಿದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿತ್ತು. ದರೋಡೆ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳು ದರೋಡೆಗೈದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಬಾಸ್ಕರ್ ಬೆಳ್ಚಪಾಡ ಸುಮಾರು 25 ವರ್ಷಗಳಿಂದ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನವನ್ನು ಬಿಟ್ಟು ಮುಂಬೈನಲ್ಲಿ ವಾಸವಾಗಿದ್ದು ಈತನ ವಿರುದ್ದ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಲ್ಲಿ ಪ್ರಕರಣಗಳು ದಾಖಲಾಗಿದೆ.