ರಾಜ್ಯದ 43 ಕಡೆ ಸ್ವಯಂ ಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್: ಸಚಿವ ರಾಮಲಿಂಗಾರೆಡ್ಡಿ

ರಾಜ್ಯದ 43 ಕಡೆ ಸ್ವಯಂ ಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್: ಸಚಿವ ರಾಮಲಿಂಗಾರೆಡ್ಡಿ


ಮಂಗಳೂರು: ರಾಜ್ಯದ ವಿವಿಧೆಡೆ 43 ನೂತನ ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳು ಹಾಗೂ 11 ಸ್ವಯಂಚಾಲಿತ ಟೆಸ್ಟಿಂಗ್ ಕೇಂದ್ರಗಳನ್ನು ಈ ವರ್ಷಾಂತ್ಯದೊಳಗೆ ಸ್ಥಾಪನೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳೂರು ಆರ್‌ಟಿಒ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರಾಕ್‌ಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆರಂಭಿಸುತ್ತಿರುವುದು ದೇಶದಲ್ಲೇ ಮೊದಲು. ಏಳೆಂಟು ಜಿಲ್ಲೆಗಳಲ್ಲಿ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉಳಿದೆಡೆ ಕೆಲಸ ಪ್ರಗತಿಯಲ್ಲಿದೆ. ಇದು ಕಾರ್ಯಾರಂಭವಾದರೆ ಡ್ರೈವಿಂಗ್ ಲೈಸನ್ಸ್ ಪರೀಕ್ಷಾ ಪ್ರಕ್ರಿಯೆಯು ಸೆನ್ಸಾರ್ ಮೂಲಕ ಸ್ವಯಂ ಚಾಲಿತವಾಗಿ ನಿರ್ವಹಣೆಯಾಗಲಿದೆ. ಅದೇ ರೀತಿ ಸ್ವಯಂ ಚಾಲಿತ ಟೆಸ್ಟಿಂಗ್ ಸೆಂಟರ್‌ಗಳ ಮೂಲಕ ವಾಹನಗಳ ಫಿಟ್ನೆಸ್ ಸರ್ಟಿಫಿಕೆಟ್, ಆರ್‌ಆರ್ ನವೀಕರಣ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ಸ್ಮಾರ್ಟ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಟೆಂಡರ್ ಹಾಕಲು ಸಾಧ್ಯವಾಗದೆ ಇದ್ದವರೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಒಂದು ತಿಂಗಳು ಸಮಸ್ಯೆಯಾಗಿತ್ತು. ನ್ಯಾಯಾಲಯವು ಆ ಅರ್ಜಿಯನ್ನು ತಿರಸ್ಕಾರ ಮಾಡಿದ ಬಳಿಕ ಸ್ಮಾರ್ಟ್ ಕಾರ್ಡ್ ಸಮಸ್ಯೆ ಬಗೆಹರಿದಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಅದೇ ರೀತಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳು 16 ಸಾವಿರದಷ್ಟು ಬಾಕಿ ಇವೆ. ಈ ವಿಚಾರ ನ್ಯಾಯಾಲಯದಲ್ಲಿದ್ದು, ಕೋರ್ಟ್ ತೀರ್ಮಾನದ ಬಳಿಕ ಪರಿಸ್ಥಿತಿ ಸರಿಯಾಗಲಿದೆ ಎಂದರು.

ರಾಜ್ಯದಲ್ಲಿ ಮಂಜೂರಾದ ಆರ್‌ಟಿಒಗಳನ್ನು ಕಾರ್ಯಾರಂಭ ಮಾಡಲು ಇನ್ಸ್‌ಪೆಕ್ಟರ್‌ಗಳ ಕೊರತೆ ಇತ್ತು. ಈಗಾಗಲೇ 80ಕ್ಕೂ ಅಧಿಕ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದ್ದು, ಹೊಸದಾಗಿ 75 ಮಂದಿಯ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ಕೆಎಸ್ಸಾರ್ಟಿಸಿ ಸಿಬ್ಬಂದಿ ನೇಮಕಾತಿ:

ರಾಜ್ಯದಲ್ಲಿ 9 ಸಾವಿರದಷ್ಟು ಕೆಎಸ್ಸಾರ್ಟಿಸಿ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ಬಹಳಷ್ಟು ಸಿಬ್ಬಂದಿ ಹೊರ ಜಿಲ್ಲೆಗಳಲ್ಲಿ ಕುಟುಂಬದಿಂದ ದೂರವಿದ್ದು ದುಡಿಯುತ್ತಿದ್ದಾರೆ. ಸೀನಿಯಾರಿಟಿ, ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಆಧಾರದ ಮೇಲೆ ಅಂತಹ 1300ರಷ್ಟು ಮಂದಿಯ ಪಟ್ಟಿ ಮಾಡಿ, ಮರಳಿ ಮಾತೃ ಜಿಲ್ಲೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಮೆಟ್ರೋ ದರ ಏರಿಕೆ ಕೇಂದ್ರದ ತೀರ್ಮಾನ..

ದೇಶದ ಯಾವುದೇ ಮೆಟ್ರೋಗಳ ನಿಯಂತ್ರಣ ಹಾಗೂ ಪೂರಕವಾದ ಎಲ್ಲ ಅನುಮತಿ ನೀಡಲು ಕೇಂದ್ರ ಸಮಿತಿ ಇರುತ್ತದೆ. ಮೆಟ್ರೋ ದರ ಪರಿಷ್ಕರಣೆ ಸೇರಿದಂತೆ ಏನೇ ತೀರ್ಮಾನ ಮಾಡುವುದಿದ್ದರೂ ಕೇಂದ್ರ ಸಮಿತಿಯ ತೀರ್ಮಾನವೇ ಆಗಿರುತ್ತದೆ. ಕೇಂದ್ರದ ತೀರ್ಮಾನದಂತೆಯೇ ಈಗ ದರ ಪರಿಷ್ಕರಣೆ ಆಗಿದೆ ಎಂದು ಸ್ಪಷ್ಟೀಕರಣ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಹಿಂದೆ ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡಿದಾಗ ಯಾಕೆ ಏರಿಕೆ ಮಾಡಬೇಕಾಯಿತು ಎಂಬ ಬಗ್ಗೆ ಸಕಾರಣ ಸಹಿತ ವಿವರ ನೀಡಿದ್ದೆ. ಈಗ ಮೆಟ್ರೋ ದರವನ್ನು ಏಕೆ ಹೆಚ್ಚಳ ಮಾಡಿದ್ದಾರೆ ಎಂಬ ಬಗ್ಗೆ ಅವರು ಉತ್ತರ ಕೊಡಲಿ. ಬಿಜೆಪಿಯಲ್ಲಿ ಎಡಬಿಡಂಗಿ ನಾಯಕರೇ ಇರೋದು. ಒಳ್ಳೆಯದಾದರೆ ತಾವೇ ಮಾಡಿದ್ದು ಅಂತಾರೆ, ಸಾರ್ವಜನಿಕರ ವಿರೋಧ ಬಂದರೆ ಅದನ್ನು ಕಾಂಗ್ರೆಸ್ ಮೇಲೆ ಹಾಕ್ತಾರೆ ಎಂದು ಟೀಕಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article