
ಕಳೆದ ಮೂರು ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಮಂಗಳೂರಿನಲ್ಲಿ 490 ಮಂದಿ ಮೃತ್ಯು
ಮಂಗಳೂರು: ಮಂಗಳೂರು ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 490 ಮಂದಿ ಮೃತಪಟ್ಟಿದ್ದಾರೆ.
2022ರಲ್ಲಿ 160, 2023ರಲ್ಲಿ 165 ಮತ್ತು 2024ರಲ್ಲಿ 165 ಮಂದಿ ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 2024ನೇ ಸಾಲಿನಲ್ಲಿ 42,000 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, 11,300 ಮಂದಿ ಮೃತಪಟ್ಟಿದ್ದಾರೆ ಮತ್ತು 54,400 ಮಂದಿ ಗಾಯಗೊಂಡಿದ್ದಾರೆ.
ಮಂಗಳೂರು ನಗರದಲ್ಲಿ 2022ರಲ್ಲಿ ನಡೆದಿರುವ ಒಟ್ಟು ಅಪಘಾತಗಳ ಸಂಖ್ಯೆ 1,209 ಇದು ಬಳಿಕದ ಎರಡು ವರ್ಷಗಳಲ್ಲಿ ಜಾಸ್ತಿಯಾಗಿದೆ. 2023ರಲ್ಲಿ 1,321 ಮತ್ತು 2024ರಲ್ಲಿ ಅಪಘಾತಗಳ ಸಂಖ್ಯೆ 1,351ಕ್ಕೆ ಏರಿದೆ.
ಮಾರಣಾಂತಿಕ ಅಪಘಾತಗಳು 2022ರಲ್ಲಿ 153, 2023ರಲ್ಲಿ 159 ಮತ್ತು 2024ರಲ್ಲಿ 160 ಸಂಭವಿಸಿದೆ. ಮಾರಣಾಂತಿಕವಲ್ಲದ ಅಪಘಾತಗಳು ಕೂಡಾ ಜಾಸ್ತಿಯಾಗಿದೆ. 2022ರಲ್ಲಿ 775, 2023ರಲ್ಲಿ 848 ಮತ್ತು 2024ರಲ್ಲಿ 863 ಮಾರಣಾಂತಿಕವಲ್ಲದ ಅಪಘಾತಗಳು ನಡೆದಿರುವುದು ವರದಿಯಾಗಿದೆ.
2022ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು 928, 2023ರಲ್ಲಿ 1,007 ಹಾಗೂ 2024ರಲ್ಲಿ 1,023 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 1,049 ಮಂದಿ ಅಪಘಾತದಿಂದಾಗಿ ಗಾಯಗೊಂಡಿದ್ದರು. 2023ರಲ್ಲಿ 1,156 ಮತ್ತು 2024ರಲ್ಲಿ 1,186 ಮಂದಿ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ.
18.50 ಕೋಟಿ ರೂ. ದಂಡ:
ಕಳೆದ ಮೂರು ವರ್ಷಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ 4,44,706 ಪ್ರಕರಣಗಳು ದಾಖಲಾಗಿವೆ. 18,50,96,200 ದಂಡ ವಿಧಿಸಲಾಗಿದೆ. 2024ರಲ್ಲಿ 1,63,454 ಪ್ರಕರಣ ದಾಖಲಿಸಲಾಗಿದ್ದು, 6,43,31,100 ರೂ ದಂಡ ವಿಧಿಸಲಾಗಿತ್ತು.
2023ರಲ್ಲಿ ಪ್ರಕರಣಗಳು 1,36,493, ದಂಡ 5,41,88,300 ಮತ್ತು 2024ರಲ್ಲಿ ಪ್ರಕರಣಗಳು 1,44,859 ಮತ್ತು ವಿಧಿಸಲಾದ ದಂಡ 6,65,76,800 ರೂ. ದಂಡ ವಿಧಿಸಲಾಗಿದೆ.
288 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ:
ಕಳೆದ ಮೂರು ವರ್ಷಗಳಲ್ಲಿ ಸುಮಾರು 288 ಶಾಲೆಗಳಲ್ಲಿ ಹಾಗೂ 176 ಕಾಲೇಜುಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. 883 ಮುಖ್ಯ ರಸ್ತೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ ಮತ್ತು ಭಿತ್ತಿಪತ್ರ ಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.