52 ಬೀದಿ ನಾಯಿಗಳಿಗೆ ವಿಧಾನಸೌಧ ಆವರಣದಲ್ಲಿ ಊಟ-ವಸತಿ ವ್ಯವಸ್ಥೆ: ಸ್ಪೀಕರ್ ಯು.ಟಿ. ಖಾದರ್

52 ಬೀದಿ ನಾಯಿಗಳಿಗೆ ವಿಧಾನಸೌಧ ಆವರಣದಲ್ಲಿ ಊಟ-ವಸತಿ ವ್ಯವಸ್ಥೆ: ಸ್ಪೀಕರ್ ಯು.ಟಿ. ಖಾದರ್


ಮಂಗಳೂರು: ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಸಮಸ್ಯೆ ಉಂಟುಮಾಡುತ್ತಿದ್ದ ಬೀದಿ ನಾಯಿಗಳನ್ನು ಅಲ್ಲೇ ಪ್ರತ್ಯೇಕವಾಗಿ ಸಾಕಿ ಊಟ-ವಸತಿ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಇದೀಗ ವಿಧಾನಸೌಧ ಆವರಣದಲ್ಲಿ 52 ಇಂತಹ ನಾಯಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೀದಿ ನಾಯಿಗಳಿಗೆ ಪ್ರತ್ಯೇಕ ವಸತಿ ಮಾಡಿಕೊಟ್ಟು, ಊಟೋಪಚಾರ ನೀಡಿ ಸಲಹಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿಹಾರಕ್ಕೂ ಅವಕಾಶ:
ಸಾಮಾನ್ಯವಾಗಿ ಶ್ವಾನಗಳ ಜೀವಿತಾವಧಿ 12 ವರ್ಷಗಳು. ಈಗ ಗುರುತಿಸಲಾಗಿರುವ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅವುಗಳಿಗೆ ಅಲ್ಲೇ ಶೆಡ್ ಹೊರಗೆ ಕಾಲಕಾಲಕ್ಕೆ ವಿಹಾರಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಕ್ರಮೇಣ ಅವುಗಳ ಸಂತತಿ ಕಡಿಮೆಯಾಗುತ್ತಾ ಸಮಸ್ಯೆ ನೀಗಲಿದೆ. ಅಲ್ಲಿಯವರೆಗೆ ಈಗಿರುವ ಶ್ವಾನಗಳಿಗೆ ಸರ್ವ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಖಾದರ್ ತಿಳಿಸಿದರು.
ಶಾಸಕರಿಗೆ 2 ಲಕ್ಷ ರೂ. ಪುಸ್ತಕ ಖರೀದಿ ಅವಕಾಶ:
ವಿಧಾನಸೌಧ ಆವರಣದಲ್ಲಿ ಫೆ.27ರಿಂದ ಮಾ.3ರವರೆಗೆ ನಡೆಯಲಿರುವ ಪುಸ್ತಕ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕರಿಗೆ ತಮ್ಮ ಶಾಸಕರ ನಿಧಿಯಿಂದ 2 ಲಕ್ಷ ರೂ.ವರೆಗೆ ಪುಸ್ತಕ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪುಸ್ತಕಗಳನ್ನು ಅವರು ತಮ್ಮ ಕ್ಷೇತ್ರದ ಸರ್ಕಾರಿ ಲೈಬ್ರರಿ ಮತ್ತು ಸರ್ಕಾರಿ ಕಾಲೇಜುಗಳಿಗೆ ಹಂಚಿಕೆ ಮಾಡಬಹುದು. ಎಲ್ಲ ಶಾಸಕರಿಗೆ ಈ ಕುರಿತು ಲಿಖಿತ ಮಾಹಿತಿ ರವಾನಿಸಲಾಗಿದೆ ಎಂದರು.
ಮೇಳದಲ್ಲಿ 250ಕ್ಕೂ ಅಧಿಕ ಸ್ಟಾಲ್‌ಗಳಿಗೆ ಬೇಡಿಕೆ ಇದ್ದರೂ 155 ಸ್ಟಾಲ್‌ಗಳಿಗೆ ಮಾತ್ರ ಅವಕಾಶ. ಪ್ರತಿದಿನ ಸಂಜೆ 5ರ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಮಾ.3ರಂದು ವಿಧಾನಮಂಡಲ ಅಧಿವೇಶನ ನಡೆಯುವುದರಿಂದ ಮಾ.2ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅಂತ್ಯಗೊಳಿಸಲಾಗುವುದು. ಮಾ.೩ರಂದು ಶಾಸಕರು ಮತ್ತು ಅವರ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಮೇಳಕ್ಕೆ ಆಗಮಿಸಲಿರುವುದರಿಂದ ಅಂದು ಸಾರ್ವಜನಿಕರಿಗೆ ಪ್ರವೇಶ ನೀಡಲಾಗದು. ಉಳಿದೆಲ್ಲ ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article