.jpeg)
ಆಶಾ ಕಾರ್ಯಕರ್ತೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಿ: ಶಾಸಕ ಕಾಮತ್ ಎಚ್ಚರಿಕೆ
ಮಂಗಳೂರು: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವು ಬೆಂಗಳೂರಿನ ತೀವ್ರ ಚಳಿಯನ್ನೂ ಲೆಕ್ಕಿಸದೇ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಳದೇ ಬೆಚ್ಚಗೆ ನಿದ್ದೆ ಹೋಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೊರೋನಾ ವಾರಿಯರ್ ಗಳಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ತ್ಯಾಗಕ್ಕೆ ಯಾವುದೇ ಸಾಟಿಯಿಲ್ಲ. ಅಂತಹವರನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಂಡು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಪ್ರತಿಭಟನಾಕಾರರು ಹಾಗೂ ಅವರ ಜೊತೆಯಿರುವ ಪುಟ್ಟ ಮಕ್ಕಳು ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಸೌಜನ್ಯ ತೋರದ ಸರ್ಕಾರ, ಹಿಟ್ಲರ್ ನೀತಿ ಮೂಲಕ ದಬ್ಬಾಳಿಕೆ ನಡೆಸಿ ಪ್ರತಿಭಟನೆ ಹತ್ತಿಕ್ಕಲು ನೋಡುತ್ತಿರುವುದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬೆಟ್ಟದಷ್ಟು ಪೊಳ್ಳು ಆಶ್ವಾಸನೆ ನೀಡಿ ಇದೀಗ ಅದನ್ನು ಈಡೇರಿಸುವುದು ಬಿಡಿ, ಕನಿಷ್ಠ ಪ್ರತಿಭಟನಾಕಾರರ ಬಳಿ ಹೋಗಿ ಸಮಸ್ಯೆ ಆಲಿಸಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಸಹಿತ ಎಲ್ಲಾ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಶಾಸಕರು ಸರ್ಕಾರವನ್ನು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.