
ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ: ಡಾ. ಪ್ರಣವ್ ಮಲ್ಯ
ಮಂಗಳೂರು: ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ದೇಶವನ್ನು ಆಳಿದ ಮುಘಲರು, ಬ್ರಿಟಿಷರು, ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ವಕ್ಫ್ ಕಾಯ್ದೆ, ಲವ್ ಜಿಹಾದ್ ನಂತಹ ಸಮಸ್ಯೆ ಹಿಂದೂಗಳು ಎದುರಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಹೇಳಿದರು.
ಫೆ.23 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಮರೋಳಿ, ಮಂಗಳೂರಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಬದುಕಿರಲು ಸಾಧ್ಯ ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಹಿಂದೂ ರಾಷ್ಟ್ರ ನಮಗೆ ಯಾರೂ ಉಡುಗೊರೆಯಾಗಿ ಕೊಡುವುದಿಲ್ಲ. ಇದಕ್ಕಾಗಿ ಸಂಘರ್ಷ ಮಾಡಬೇಕಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಸರ್ವಸ್ವವನ್ನು ತ್ಯಾಗ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ತಿಳಿಸಿದರು.
ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅಧ್ಯಕ್ಷ ಗಣೇಶ್ ಶೆಟ್ಟಿ ಮಾತನಾಡಿ, ದೇವಸ್ಥಾನ ರಕ್ಷಣೆ, ಹಿಂದೂ ಧಾರ್ಮ ರಕ್ಷಣೆಯನ್ನು ಮಾಡಲು ಅನೇಕ ಹಿಂದೂ ಸಂಘಟನೆಗಳು ಕಾರ್ಯನಿರತವಾಗಿದೆ. ಅವರನ್ನು ಬೆಂಬಲಿಸುವುದು ಮತ್ತು ನಮ್ಮ ನಮ್ಮ ಸ್ಥರದಲ್ಲಿ ಹಿಂದೂ ಧರ್ಮರಕ್ಷಣೆಯ ಕಾರ್ಯವನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ. ಹಿಂದೂಗಳು ಸಂಘಟಿತರಾಗಿ ಧರ್ಮ ರಕ್ಷಣೆಯನ್ನು ಮಾಡಲು ಕರೆ ನೀಡಿದರು.
ಸನಾತನ ಸಂಸ್ಥೆಯ ವಕ್ತಾರೆ ಲಕ್ಷ್ಮಿ ಪೈ ಮಾತನಾಡಿ, ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ ಎಂದು ಸನಾತನ ಧರ್ಮದ ವೈಜ್ಞಾನಿಕತೆಯ ಬಗ್ಗೆ ಹಾಗೂ ಶ್ರೇಷ್ಠತ್ವದ ಬಗ್ಗೆ ವಿವರಿಸಿದರು.
ವರ್ತಮಾನ ಕಾಲದಲ್ಲಿ ಹಿಂದೂಗಳು ಧರ್ಮದಿಂದ ದೂರ ಹೋಗಿರುವುದರಿಂದಲೇ ಅನೇಕ ಸಂಕಟಗಳನ್ನು ಮತ್ತು ಆಘಾತಗಳನ್ನು ಎದುರಿಸಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳ ಕಥೆ ‘ಕೇರಳ ಸ್ಟೋರಿ’ ಹಾಗೆ ಆಗಬಾರದಾದರೆ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣವನ್ನು ನೀಡಿ, ಧರ್ಮ ಜಾಗೃತಿಯನ್ನು ಮೂಡಿಸಬೇಕಾಗಿದೆ. ನಾವೆಲ್ಲರೂ ಈ ಕ್ಷಣದಿಂದ ಧರ್ಮಪಾಲನೆಯನ್ನು ಮಾಡಿ ಸಾಧನೆಯನ್ನು ಪ್ರಾರಂಭಿಸಿ ಸನಾತನ ಧರ್ಮರಕ್ಷಣೆಯ ದಿವ್ಯ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಸುಮಾರು 150 ಕೂ ಅಧಿಕ ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.