
ಸ್ವಾಮಿ ವಿವೇಕಾನಂದರ ಚಿಂತನೆಯ ನಿಜವಾದ ವಾರಿಸುದಾರರು ಎಡಪಂಥೀಯರು ಮಾತ್ರ: ಡಾ. ಎನ್. ಇಸ್ಮಾಯಿಲ್
ಮಂಗಳೂರು: ಸ್ವಾಮಿ ವಿವೇಕಾನಂದರು 19ನೇ ಶತಮಾನದ ಭಾರತೀಯ ಪುನರುಜ್ಜೀವನ ಆಂದೋಲನದ ಪ್ರಮುಖ ನೇತಾರರಲ್ಲಿ ಒಬ್ಬರಾಗಿದ್ದರೆ ವಿನಃ ಹಿಂದುತ್ವವಾದಿಗಳು ಪ್ರತಿಪಾದಿಸುತ್ತಿರುವಂತೆ ಕೇವಲ ಸಂಕುಚಿತ ದೃಷ್ಠಿಯ ಹಿಂದುತ್ವದ ನೇತಾರರಾಗಿರಲಿಲ್ಲ. ಪ್ರಗತಿಪರ ಚಿಂತನೆಯ ಜಾತ್ಯತೀತ ಭಾವನೆಯ ಅತ್ಯಂತ ಮಾನವೀಯ ಮನಸ್ಸಿನ ವಿವೇಕಾನಂದರು ಭವ್ಯ ಭಾರತದ ಬಗ್ಗೆ ಆಳವಾದ ಚಿಂತನೆ ನಡೆಸಿದ್ದರು. ಆ ಮೂಲಕ ವಿವೇಕಾನಂದರ ಚಿಂತನೆಯ ನಿಜವಾದ ವಾರಿಸುದಾರರು ಎಡಪಂಥೀಯರೇ ಹೊರತು ಬಲಪಂಥೀಯ ಹಿಂದುತ್ವವಾದಿ ಶಕ್ತಿಗಳಲ್ಲ ಎಂದು ಪ್ರಗತಿಪರ ಚಿಂತಕರೂ, ನಿವೃತ್ತ ಪ್ರಾಂಶುಪಾಲ ಡಾ. ಎನ್. ಇಸ್ಮಾಯಿಲ್ ಹೇಳಿದರು.
ಅವರು ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆಯ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಕುತ್ತಾರ್‌ನಲ್ಲಿರುವ ಮುನ್ನೂರು ಯುವಕ ಮಂಡಲದಲ್ಲಿ ಯುವಜನರ ವಿವೇಕವೂ, ವಿವೇಕಾನಂದರ ಚಿಂತನೆಯೂ ಎಂಬ ವಿಷಯದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ವಕೀಲ ಮನೋಜ್ ವಾಮಂಜೂರು ಮಾತನಾಡಿ, ಒಬ್ಬ ಶೂದ್ರನಾಗಿ ಸನ್ಯಾಸದೀಕ್ಷೆ ಪಡೆದ ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವರ್ಗದ ಅನ್ಯಾಯ ಅನಾಚಾರದ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಮಾತ್ರವಲ್ಲದೆ ಶೂದ್ರರ ಆಡಳಿತದ ಸಿದ್ದಾಂತವನ್ನು ಮಂಡಿಸಿದ್ದರು. ಅದು ಕಾರ್ಮಿಕ ವರ್ಗದ ಆಳ್ವಿಕೆಯ ಭಾರತೀಯ ರೂಪವಾಗಿತ್ತು. ಅವರೇ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುವಂತಹ ಭಾರತ ನಿರ್ಮಾಣವಾಗಬೇಕೆಂದು ಸ್ವಾಮಿ ವಿವೇಕಾನಂದರು ಹಂಬಲಿಸಿದ್ದರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಅವರು, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ದೇಶದ ಯುವಶಕ್ತಿ ಸಮಾಜವನ್ನು ಮುನ್ನಡೆಸಲು ಪ್ರೇರಣಾಶಕ್ತಿಯಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀಡಿ ಕಾರ್ಮಿಕರ ಬದುಕಿಗೆ ಸಂಬಂಧಿಸಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ಡಾ. ಹರಿಣಾಕ್ಷಿ ಸುವರ್ಣ ಕುಂಪಲ, ಸಮಾಜಸೇವೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಬಾಬು ಪಿಲಾರ್, ಸಮಾಜಮುಖಿ ಚಟುವಟಿಕೆಗಳ ಮೂಲಕ ಊರಿನ ಯುವಜನರನ್ನು ಸಂಘಟಿಸಿ ಪ್ರಸ್ತುತ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿದ ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಹರೀಶ್ ಮುಂಡೋಳಿ, ದೈಹಿಕ ಶಿಕ್ಷಣದ ಮೂಲಕ ಯುವಜನರಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರೇರೇಪಿಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇತ್ತೀಚಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ, ದೈಹಿಕ ಶಿಕ್ಷಕ ಜಯಾನಂದ ಅಂಚನ್ ಇವರುಗಳನ್ನು ಅತ್ಯಂತ ಹ್ರದಯಪೂರ್ವಕವಾಗಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, ಕಟ್ಟಡ ಕಾರ್ಮಿಕರ ಮುಖಂಡರಾದ ಜನಾರ್ಧನ ಕುತ್ತಾರ್, ಯುವಜನ ನಾಯಕರೂ, ವಕೀಲ ನಿತಿನ್ ಕುತ್ತಾರ್, ಯೆನೆಪೋಯ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲ ಡಾ. ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು.