ಜೈಲಿನೊಳಗೆ ಪೊಟ್ಟಣ ಎಸೆದ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯ

ಜೈಲಿನೊಳಗೆ ಪೊಟ್ಟಣ ಎಸೆದ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯ

ಮಂಗಳೂರು: ನಗರದ ಜೈಲಿನೊಳಗೆ ರಸ್ತೆಯಿಂದ ಪೊಟ್ಟಣ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಬೇಕು. ಪೊಟ್ಟಣ ಎಸೆದವರು ಯಾರು, ಅದರಲ್ಲಿ ಏನಿತ್ತು, ಯಾರು ಈ ಪ್ರಕರಣವನ್ನು ಕೋ ಆರ್ಡಿನೇಶನ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಒತ್ತಾಯಿಸಿದೆ. 

ಜೈಲಿನೊಳಗೆ ಎಸೆದ ಪೊಟ್ಟಣದಲ್ಲಿ ಚಾಹುಡಿ ಇತ್ತು ಎಂದು ಜೈಲಿನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಜೈಲಿನೊಳಗಿರುವ ಕೈದಿಗಳಿಗೆ ಚಾಹುಡಿ ನೀಡುವಷ್ಟು ಯೋಗ್ಯತೆ ರಾಜ್ಯ ಸರಕಾರಕ್ಕೆ ಇಲ್ಲವೇ? ಜೈಲಿನೊಳಗೆ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವುದು ಹೊಸ ವಿಷಯವಲ್ಲ. ಮಾದಕ ವಸ್ತುಗಳು ಎಲ್ಲಿಂದ, ಹೇಗೆ ಪೂರೈಕೆ ಆಗುತ್ತಿವೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಆರೋಗ್ಯಕ್ಕೆ ಹೆಸರಾಗಿದೆ. ಆದರೆ, ಜಿಲ್ಲೆಯಲ್ಲಿ ಈಗ ಸುಲಭವಾಗಿ ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗುತ್ತಿದೆ. ಡ್ರಗ್ಸ್ ಪೂರೈಕೆ ಹಾಗೂ ಅಮಲು ಪದಾರ್ಥ ಸೇವನೆಯಿಂದ ನಡೆಯುವ ಅಪರಾಧ ಕೃತ್ಯಗಳ ತಡೆಗೆ ಪೊಲೀಸ್ ಇಲಾಖೆ ವಿ-ಲವಾಗಿದೆ. ದುಶ್ಚಟಗಳನ್ನು ನಿಲ್ಲಿಸಲು ಸರಕಾರಕ್ಕೂ ಆಸಕ್ತಿ ಇಲ್ಲ. ದಕ್ಷಿಣ ಕನ್ನಡ ಡ್ರಗ್ಸ್ ಮುಕ್ತ ಜಿಲ್ಲೆಯಾಗಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆಗೆ ಮುಕ್ತವಾಗಿ ಕೆಲಸ ಮಾಡಲು ರಾಜ್ಯ ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನೀಡುತ್ತಿಲ್ಲ. ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದೆ. ಸರಕಾರ ಒಂದು ಕೋಮು, ಮತದವರಿಗೆ ಸೀಮಿತವಾದಂತೆ ಕೆಲಸ ಮಾಡುತ್ತಿದೆ. ಸಿಎಎ ಗಲಭೆ ವೇಳೆ ಅಂದಿನ ಬಿಜೆಪಿ ಸರಕಾರ ಪೊಲೀಸರ ಪರವಾಗಿತ್ತು. ಗಲಭೆಯನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಆದರೆ, ಇತ್ತೀಚೆಗೆ ಪೊಲೀಸ್ ಇಲಾಖೆ ಬಗ್ಗೆ ಭಯವೇ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ದನದ ಕೆಚ್ಚಲು ಕೊಯ್ದ ಘಟನೆ, ಹೊನ್ನಾವರದಲ್ಲಿ ಗಬ್ಬದ ಹಸುವಿನ ಹತ್ಯೆ, ಕೋಟೆಕಾರ್ನಲ್ಲಿ ಬ್ಯಾಂಕ್ ದರೋಡೆ ಪ್ರಕರಣ ಈ ಹಿಂದಿನ ಬಿಹಾರವನ್ನು ನೆನಪಿಸುವಂತಿದೆ. ಕರ್ನಾಟಕ ಈಗ ಹಿಂದಿನ ಬಿಹಾರ ಆಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಪೊಲೀಸ್ ಭದ್ರತೆ ಇರುವ ಜೈಲಿನೊಳಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿದ ಪೊಟ್ಟಣ ಎಸೆದದ್ದು ಯಾರು ಎಂಬುದನ್ನು ಪತ್ತೆ ಮಾಡಬೇಕು. ಎಸೆದ ಪೊಟ್ಟಣವನ್ನು ಯಾರು ಹೆಕ್ಕಿದ್ದಾರೆ ಎಂಬುದನ್ನು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ವಿಚಾರಣೆ ಮಾಡಿದರೆ ಎಸೆದದ್ದು ಯಾರು ಎಂಬುದು ತಿಳಿಯಲಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಚಾಹುಡಿಯನ್ನು ಜೈಲಿನ ಬಾಗಿಲಿನ ಮೂಲಕ ತೆರಳಿ ನೇರವಾಗಿ ನೀಡಬಹುದಿತ್ತು. ನಂಬರ್‌ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದ ಮೂಲಕ ಆಗಮಿಸಿ ಎಸೆಯುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ಈ ಹಿಂದೆಯೂ ಇಂತಹ ಘಟನೆ ನಡೆದಿತ್ತು. ಇನ್ನು ಮುಂದಕ್ಕೆ ಮರುಕಳಿಸಬಾರದು. ಜೈಲಿನೊಳಗೆ ಮಾದಕ ವಸ್ತುಗಳು ಸಿಗುವಂತಿದ್ದರೆ, ಹೊರಗಡೆ ವಿದ್ಯಾರ್ಥಿಗಳ ಕೈಗೆ ಎಷ್ಟು ಸುಲಭದಲ್ಲಿ ಸಿಗಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಸರಕಾರ ಪೊಲೀಸ್ ಇಲಾಖೆ ಕೈಕಟ್ಟಿಹಾಕಿದೆ. ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ನೀಡಿದಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಬಹುದು ಎಂದರು.

ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್‌ರಾಜ್ ಕೃಷ್ಣಾಪುರ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಗರೋಡಿ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಉತ್ತರ ಮಂಡಲ ಅಧ್ಯಕ್ಷ ರಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article