ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣದ ಆರೋಪಿ ಪತಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಸುಳ್ಯ ತಾಲೂಕಿನ ತೋಡಿಕಾನ ಅಂಡ್ಯಡ್ಕ ಸಿಆರ್‌ಸಿ ಕ್ವಾಟ್ರರ್ಸ್ ನಿವಾಸಿ ರಾಜ (64) ಶಿಕ್ಷೆಗೊಳಗಾದ ಆರೋಪಿ. ಈತನು ತನ್ನು ಪತ್ನಿ ಕಮಲಾ (57) ಎಂಬಾಕೆಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ. 

2022ರ ಸೆ.4ರಂದು ದಂಪತಿ ರಾಜಾ ಮತ್ತು ಕಮಲಾ ರಬ್ಬರ್ ಮ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ಕೊಯೂರು ಗ್ರಾಮದ ಅಲೆಕ್ಕಿ ಎಂಬಲ್ಲಿನ ಧರ್ಣಪ್ಪ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇವರಿಗೆ ರಬ್ಬರ್ ತೋಟದ ಶೆಡ್‌ನಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು. 

2022ರ ಸೆ.6ರಂದು ಸಂಜೆ 5.30ಕ್ಕೆ ಕುಡಿದ ಮತ್ತಿನಲ್ಲಿ ಇವರು ಪರಸ್ಪರ ಜಗಳವಾಡಿದ್ದರು. ರಾತ್ರಿ 8ರ ವೇಳೆಗೆ ಆರೋಪಿಯು ಕೋಪದಿಂದ ತನ್ನ ಹೆಂಡತಿ ಕಮಲಾಳ ಕುತ್ತಿಗೆಯನ್ನು ಒತ್ತಿ ಹಿಡಿದು ನೆಲಕ್ಕೆ ಬೀಳಿಸಿದ್ದ. ಬಳಿಕ ರಾಜನು ತನ್ನ ಪತ್ನಿ ಆತ್ಮಹತ್ಯೆ ಮಾಡಿದ್ದಾಳೆ ಎಂದು ಬಿಂಬಿಸಲು ಲುಂಗಿಯೊಂದನ್ನು ಹರಿದು ಹಗ್ಗದಂತೆ ಮಾಡಿ ಅದರಿಂದ ಕಮಲಾರ ಕುತ್ತಿಗೆಗೆ ಬಿಗಿದಿದ್ದ. ಪರಿಣಾಮ ಕಮಲಾ ಮೃತಪಟ್ಟಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ಪ್ರಕರಣ ದಾಖಲಾಗಿತ್ತು. 

ಕಮಲಾರ ಸಾವು ಪ್ರಾರಂಭಿಕ ಹಂತದಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದ್ದರೂ ಮರಣೋತ್ತರ ಪರೀಕ್ಷೆ ನಡೆಸಿದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ವರ್ಷಾ ಶೆಟ್ಟಿ ಇದು ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲಾ ಗಿದೆ ಎಂದು ವರದಿ ನೀಡಿದ್ದರು. ಈ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಸಂಧ್ಯಾ ಎಸ್. ವಿಚಾರಣೆ ನಡೆಸಿದ್ದರು. ಅದರಂತೆ ಗುರುವಾರ ಆರೋಪಿಗೆ ಭಾರತೀಯ ದಂಡ ಸಂಹಿತೆ 302ರಡಿ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಕೊಲೆಯಾದ ಮಹಿಳೆಯ ಮೂವರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಸೂಚಿಸಿದೆ. 

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಬೆಳ್ತಂಗಡಿ ಠಾಂಣೆಯ ಅಂದಿನ ಎಎಸ್‌ಐ ನಂದಕುಮಾರ್ ಎಂ.ಎಂ. ಮತ್ತು ಅಂದಿನ ಇನ್‌ಸ್ಪೆಕ್ಟರ್ ಶಿವಕುಮಾರ್ ಬಿ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article