ರಾಜಣ್ಣ ಶಿಸ್ತಿನಿಂದ ಇರಲಿ: ಸಚಿವ ದಿನೇಶ್ ಗುಂಡೂರಾವ್
Monday, February 17, 2025
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸಚಿವ ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಹೈಕಮಾಂಡ್ ಎಲ್ಲೂ ಈ ಬಗ್ಗೆ ಹೇಳಿಕೆ ಕೊಡದಂತೆ ಹೇಳಿದೆ. ಅದನ್ನು ಕೇಳಿಯಾದರೂ ಅವರು ಶಿಸ್ತಿನಿಂದ ಇರಲಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ವಿಚಾರ ಸಾರ್ವಜನಿಕವಾಗಿ ಅನಾವಶ್ಯಕ ಚರ್ಚೆಯಾಗುತ್ತಿದೆ. ಇಂಥ ಹೇಳಿಕೆಗಳನ್ನು ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಏನೇ ಇದ್ದರೂ ಹೈಕಮಾಂಡ್ ಮಟ್ಟದಲ್ಲೇ ಅದೆಲ್ಲಾ ತೀರ್ಮಾನವಾಗಬೇಕು. ಯಾರಿಗೆ ಏನೇ ವಿಷಯ ಇದ್ದರೂ ಅಲ್ಲಿ ಹೇಳಿಕೊಂಡು ತೀರ್ಮಾನ ಮಾಡಿದರೆ ಉತ್ತಮ. ಅದು ಬಿಟ್ಟು ಹೊರಗಡೆ ಹೇಳುವುದರಿಂದ ನಮ್ಮ ಪಕ್ಷಕ್ಕೂ ಒಳ್ಳೆಯದಲ್ಲ. ನನ್ನ ಅಭಿಪ್ರಾಯದ ಪ್ರಕಾರ ಈ ತರಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಹೈಕಮಾಂಡ್ ಕೂಡ ಯಾರೂ ಈ ಥರ ಹೇಳಿಕೆ ಕೊಡಬೇಡಿ ಎಂದು ಹೇಳಿದೆ. ಅದನ್ನು ಕೇಳಿಕೊಂಡಾದರೂ ಎಲ್ಲರೂ ಸ್ವಲ್ಪ ಶಿಸ್ತಿನಿಂದ ಇರಬೇಕು ಎಂದರು.