ಸಂವಿಧಾನ ಜಾಗೃತಿ ಸಮಾವೇಶ, ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ

ಸಂವಿಧಾನ ಜಾಗೃತಿ ಸಮಾವೇಶ, ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಸಂವಿಧಾನ ಜಾಗೃತಿ ಸಮಾವೇಶ ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ ಸಮಾವೇಶ ಮಂಗಳವಾರ ನಗರದ ಉರ್ವಸ್ಟೋರ್ನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಎಸ್‌ಸಿ ಘಟಕದ ಪಾತ್ರ ಮಹತ್ತರವಾಗಿದ್ದು, ಹಿರಿಯ ನಾಯಕರ ಸಹಕಾರದಿಂದ ಜಿಲ್ಲೆಯಲ್ಲಿ ಘಟಕವನ್ನು ಬಲಿಷ್ಠಗೊಳಿಸಿ ಪಕ್ಷಕ್ಕೆ ಶಕ್ತಿ ತುಂಬಲು ಶ್ರಮವಹಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಪಕ್ಷ ಕಟ್ಟುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.

ಎಐಸಿಸಿ ಪರಿಶಿಷ್ಟ ಜಾತಿ ಘಟಕದ ಸಂಯೋಜಕ ಎಫ್.ಎಚ್ ಜಕ್ಕಪ್ಪನವರ್ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ 84 ಕ್ಷೇತ್ರ ಪರಿಶಿಷ್ಟ ಜಾತಿಗೆ, 47 ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವುಗಳಲ್ಲಿ 100 ಕ್ಷೇತ್ರಗಳನ್ನು ಆರ್‌ಎಸ್‌ಎಸ್‌ನವರು ಬಿಜೆಪಿ ಪರವಾಗಿ ಗೆಲುವು ಸಾಧಿಸಿ ಕೊಟ್ಟಿರುವುದರಿಂದ ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಾಯಿತು. ದಲಿತ ಸಂಘಟನೆಗಳು ಆರೆಸ್ಸೆಸ್ ಅನ್ನು ಎದುರಿಸದೇ ಹೋದರೆ ಬಾಬಾ ಸಾಹೇಬ್ ಅಂಬೇಡ್ಕರ್ ಮತದಾನದ ಹಕ್ಕನ್ನು ನೀಡಿದ ಸಮುದಾಯಕ್ಕೆ ಸಂಪೂರ್ಣ ಹಿನ್ನಡೆಯಾಗುತ್ತದೆ ಎಂದು ಹೇಳಿದರು.


ಆರ್‌ಎಸ್‌ಎಸ್ ಸಂವಿಧಾನ ಬದಲಾವಣೆಯ ಕುರಿತು ಆರೆಸ್ಸೆಸ್ ಹೇಳುತ್ತಲೇ ಇದ್ದು, ಈಗಾಗಲೇ ಹೊಸ ಸಂವಿಧಾನದ ಕರಡನ್ನು ಸಿದ್ದಪಡಿದೆ. ಈ ಬಗ್ಗೆ ಎಚ್ಚರಗೊಳ್ಳದಿದ್ದರೆ ಅಂಬೇಡ್ಕರ್ ಗಳಿಸಿಕೊಟ್ಟ ಸ್ವತಂತ್ರ, ಸಂವಿಧಾನ ಎಲ್ಲವನ್ನೂ ಅಪಾಯಕ್ಕೆ ಬಂದುಬಿಡುತ್ತದೆ. 2028ರ ಒಳಗಾಗಿ ಕ್ಷೇತ್ರ ಮರುವಿಂಗಡೆ ಮಾಡಿ ಹೊಸ 280 ಲೋಕಸಭಾ ಸಭಾ ಕ್ಷೇತ್ರಗಳನ್ನು ಮರುವಿಂಗಡನೆ ಮಾಡುವ ತಂತ್ರ ಬಿಜೆಪಿ ರೂಪಿಸಿದೆ. ಎಲ್ಲ ಬ್ಲಾಕ್, ಮುಂಚೂಣಿ ಘಟಕಗಳು ಸೇರಿಕೊಂಡು ಬೂತ್‌ಗಳಲ್ಲಿ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಪಕ್ಷ ಸಂಘಟನೆ ಮಾಡಿದರೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಗತವೈಭವ ಮರುಕಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್. ಧರ್ಮಸೇನ, ಸಮುದಾಯದ ಏಳಿಗೆಗೆ ರಾಜಕೀಯ ಪ್ರಮುಖ ಪಾತ್ರವಹಿಸುತ್ತದೆ. ದಲಿತರು ಹೋರಾಟದ ಜೊತೆಗೆ ರಾಜಕೀಯದಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ದಲಿತ ಸಮುದಾಯದ ರಕ್ಷಣೆಗೆ ಕಾಂಗ್ರೆಸ್ ಸರಕಾರ ಬದ್ಧವಾಗಿದ್ದು, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸಮುದಾಯದ ಏಳಿಗೆಗೆ ಮತ್ತಷ್ಟು ಎಸ್‌ಸಿ ಘಟಕ ಶ್ರಮವಹಿಸಬೇಕು. ಮನೆ ಮನೆಗೆ ತರಳಿ ಕಾಂಗ್ರೆಸ್ ಅಗತ್ಯತೆ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷ ದಿನೇಶ್ ಮೂಳೂರು ಅವರಿಗೆ ನಿಕಟಪೂರ್ವ ಅಧ್ಯಕ್ಷ ಶೇಖರ ಕುಕ್ಕೇಡಿ ಅಧಿಕಾರ ಹಸ್ತಾಂತರಿಸಿದರು. 

ಈ ವೇಳೆ ದಲಿತ ಡಿ.ಸಿ. ಮನ್ನಾ ಜಮೀನು, ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ಮತ್ತು ಮಂಗಳೂರು ವಿಶ್ವವಿದ್ಯಾನಿಯದಲ್ಲಿ ಅಧ್ಯಯನ ಪೀಠ ರಚಿಸುವಂತೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಮತ್ತು ದಲಿತ ಮುಖಂಡರು ಸಚಿವ ಸತೀಶ್ ಜಾರಕಿಹೊಳಿಗೆ ಮನವಿ ಸಲ್ಲಿಸಿದರು. ಸುಮಾರು 350ಕ್ಕೂ ಅಧಿಕ ‘ಸಂವಿಧಾನ ಓದು’ ಪುಸ್ತಕ ಸಭಿಕರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷೆ ಪುಷ್ಪ ಅಮರ್‌ನಾಥ್, ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆಪಿಸಿಸಿ ಎಸ್‌ಸಿ ಘಟಕದ ರಾಜ್ಯ ಸಂಚಾಲಕ ಕಾಳಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್. ಮಹಮ್ಮದ್, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ರಾಜ್ಯ ಗೇರು ನಿಗಮ ಅಭಿವೃದ್ಧಿಯ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಸಂಯೋಜಕ ಜಿ. ಕೃಷ್ಣಪ್ಪ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷೆ ಶಾಲೆಟ್ ಪಿಂಟೊ, ಇಬ್ರಾಹೀಂ ನವಾಝ್, ಜೋಕಿಂ ಡಿಸೋಜ, ಕೆ.ಕೆ.ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಅಬ್ಬಾಸ್ ಅಲಿ, ಡಾ. ಶೇಖರ್ ಪೂಜಾರಿ, ಮನೋರಾಜ್ ರಾಜೀವ, ಮ.ನ.ಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಬಂಟ್ವಾಳ ಪುರಸಭಾ ಸದಸ್ಯ ಜನಾರ್ಧನ್ ಚೆಂಡ್ತಿಮಾರ್, ಟಿ. ಹೊನ್ನಯ್ಯ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಪರಿಶಿಷ್ಟ ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್, ಕಿರಣ್ ಕುಮಾರ್ ಸ್ವಾಗತಿಸಿದರು. ಪ್ರೇಮನಾಥ್ ಬಳ್ಳಾಲ್ ಭಾಗ್ ವಂದಿಸಿ, ರೋಹಿತ್ ಉಳ್ಳಾಲ, ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article