
ಕೈ-ಕಮಲ ಉದ್ಘಾಟನಾ ಪಾಲಿಟಿಕ್ಸ್: ಉಸ್ತುವಾರಿ ಸಚಿವರಿಂದ ವಾಗ್ದಾಳಿ
ಮಂಗಳೂರು: ರಾಜಕೀಯ ಮೇಲಾಟದಲ್ಲಿ ಒಮ್ಮೆ ಉದ್ಘಾಟನೆಯಾಗಿದ್ದ ನಗರದ ಜಪ್ಪಿನಮೊಗರಿನ ಹೊಸ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತೆ ಇಂದು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬಿಜೆಪಿ ನಾಯಕರು ಕೊಳಕು ರಾಜಕೀಯ ಮಾಡಿದ್ದಾರೆ. ರಾಜಕೀಯ ವಾತಾವರಣ ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿರು.
ಇವರು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ನಾವು ಎಲ್ಲರನ್ನು ಕರೆದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಕೊಳಕು ರಾಜಕೀಯ ಮಾಡುವುದು ಸರಿಯಲ್ಲ. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿದ್ದಲ್ಲ, ಇವರದೇ ಹಣ, ಭೂಮಿ ಆಗಿರುತ್ತಿದ್ದರೆ ಕೇಳುತ್ತಿರಲಿಲ್ಲ. ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ, ತಿಂಗಳಲ್ಲಿ 2-3 ಬಾರಿ ಮಂಗಳೂರಿಗೆ ಬರುತ್ತೇನೆ. ಒಂದು ಫೋನ್ ಮಾಡಬಹುದಿತ್ತಲ್ವಾ.. ಶಾಸಕನ ನಡೆಯಿಂದ ಮುಜುಗರ ಸೃಷ್ಟಿ ಆಗಿದೆ ಎಂದು ಹೇಳಿದರು.
ಉದ್ಘಾಟನೆಯನ್ನು ಸೂಚಿಸುವ ಕಲ್ಲಿನಲ್ಲೂ ಇವರದೇ ಹೆಸರು ಹಾಕಿದ್ದಾರೆ. ಇಷ್ಟೆಲ್ಲ ಆಗುವಾಗ ಅಧಿಕಾರಿಗಳು ಸುಮ್ಮನಿದ್ರಾ.. ಏನೂ ಗೊತ್ತೇ ಆಗಲಿಲ್ವಾ.. ಯಾಕೆ ನನ್ನ ಗಮನಕ್ಕೆ ತಂದಿಲ್ಲ. ಇದಕ್ಕೆ ಯಾರು ಕಾರಣ ಅಂತ ವರದಿ ಕೊಡಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಇಲ್ಲಿನ ಬಿಜೆಪಿ ಶಾಸಕರು ರಾಜಕೀಯದ ಸಣ್ಣತನ ತೋರಿಸಿದ್ದಾರೆ. ಇವತ್ತು ಕೂಡ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಬಂದಿಲ್ಲ, ಇದೇನಾ ಇವರು ಸರ್ಕಾರಿ ಕಾರ್ಯಕ್ರಮಕ್ಕೆ ಕೊಡುವ ಗೌರವ ಎಂದು ಪ್ರಶ್ನಿಸಿದರು.