
ಗ್ಯಾರಂಟಿ ಕೊರತೆ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಮಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಅನುದಾನ ಕೊರತೆ ಕುರಿತು ವಿಪಕ್ಷ ಬಿಜೆಪಿ ಆರೋಪಕ್ಕೆ ಕಿಡಿ ಕಾರಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರಿಗೆ ಕೆಲಸ ಇಲ್ಲ, ಕೆಲಸ ಇಲ್ಲವಾದರೆ ಮೈ ಎಲ್ಲ ಪರಚಿಕೊಂಡ ರೀತಿ ಬಿಜೆಪಿಯ ಪರಿಸ್ಥಿತಿಯಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮೊದಲು ಉತ್ತರಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಹಣ ಬರುತ್ತಿಲ್ಲ, ಅವರ ಹಣ ಸಹ ನಾವೇ ಕೊಡುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಅನ್ಯಾಯ ವಿರುದ್ಧ ಬಿಜೆಪಿ ಧ್ವನಿ ಎತ್ತಲಿ:
ಜಲಜೀವನ್ ಮಿಷನ್‌ನಡಿ ರಾಜ್ಯಕ್ಕೆ 3,600 ಕೋಟಿ ರೂ. ಕೇಂದ್ರ ಕೊಡಬೇಕಿತ್ತು. ನಮಗೆ ಬಂದಿರುವುದು ಕೇವಲ 517 ಕೋಟಿ ರೂ. ಕುಡಿಯುವ ನೀರಿನ ಯೋಜನೆಯ ನ್ನು ನಿಲ್ಲಿಸಬಾರದು ಎಂದು ನಮ್ಮ ರಾಜ್ಯ ಸರ್ಕಾರವೇ 2,900 ಕೋಟಿ ರೂ. ನೀಡಿದೆ. ಹೆಸರು ಮಾತ್ರ ಬಿಜೆಪಿಯವರದ್ದು ಆದರೆ ದುಡ್ಡು ನಮ್ಮದು. ನಮಗೆ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಯಲ್ಲಿ ಕೇಂದ್ರ ಅನ್ಯಾಯ ಮಾಡುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕಕ್ಕೆ ಬಿಡಿಗಾಸು ನೀಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶ, ಬಿಹಾರ್ ರಾಜ್ಯಗಳಿಗೆ ಕೋಟ್ಯಂತರ ರು. ಮೊತ್ತ ನೀಡುತ್ತಿದೆ. ಕೇಂದ್ರ ಸರ್ಕಾರದಿಂದದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಬಿಜೆಪಿ ಮೊದಲು ಧ್ವನಿ ಎತ್ತಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗೃಹ ಲಕ್ಷ್ಮಿ ಯೋಜನೆ ಹಣ ನೀಡಲು ವಿಳಂಬವಾಗಿರುವುದು ನಿಜ. ಈ ವಾರದಲ್ಲಿ ಹಣ ಪಾವತಿಯಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಿರುವಾಗ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.