ಓದಿಗೆ ವಯಸ್ಸಿನ ಮಿತಿ ಇಲ್ಲ, ಓದುವ ಹವ್ಯಾಸ ಹೆಚ್ಚಬೇಕು: ಸಚಿವ ದಿನೇಶ್ ಗುಂಡೂರಾವ್

ಓದಿಗೆ ವಯಸ್ಸಿನ ಮಿತಿ ಇಲ್ಲ, ಓದುವ ಹವ್ಯಾಸ ಹೆಚ್ಚಬೇಕು: ಸಚಿವ ದಿನೇಶ್ ಗುಂಡೂರಾವ್


ಮಂಗಳೂರು: ಗ್ರಂಥಾಲಯಗಳು ಆಧುನಿಕ ವ್ಯವಸ್ಥೆಯತ್ತ ಸಾಗುತ್ತಿದ್ದು, ಯೆಯ್ಯಾಡಿಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉತ್ತಮ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದ ಯೆಯ್ಯಾಡಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯದ ಕೇಂದ್ರ ಕಚೇರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. 

ಓದಿಗೆ ವಯಸ್ಸಿನ ಮಿತಿ ಇಲ್ಲ. ಓದುವ ಹವ್ಯಾಸ ನಮ್ಮಲ್ಲಿ ಜಾಸ್ತಿಯಾಗಬೇಕು. ಅದರಲ್ಲೂ ಯುವಜನರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದ ಅವರು ಪತ್ರಿಕೆ, ಮ್ಯಾಗಝಿನ್, ಕತೆ, ಕಾದಂಬರಿಗಳ ಓದುವುದರಿಂದ ನಮಗೆ ಹೆಚ್ಚಿನ ಜ್ಞಾನ ಸಿಗುತ್ತದೆ. ಇವತ್ತು ಸಾಮಾಜಿಕ ಮಾಧ್ಯಮಗಳ ಬಳಕೆ ನಮ್ಮಲ್ಲಿ ಜಾಸ್ತಿಯಾಗಿದೆ. ಇದರಿಂದ ಏನು ಪ್ರಯೋಜನ ಇಲ್ಲ ಎಂದರು. 

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಹಾನಗರಪಾಲಿಕೆಯ ಸದಸ್ಯರಾದ ಶಶಿಕಲಾ ಕಾವ, ಎ.ಸಿ. ವಿನಯ್ರಾಜ್ , ಗೇರು ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತ ಜಯವಿಭವ ಸ್ವಾಮಿ , ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಉದ್ಘಾಟನೆ ಮಾತ್ರವಲ್ಲ ಶಿಲಾನ್ಯಾಸ ಭಾಗ್ಯವೂ ಸಿಗಲಿ..

ಜಿಲ್ಲಾ ಕೇಂದ್ರ ಗ್ರಂಥಾಲಯದ ಕೇಂದ್ರ ಕಚೇರಿಯ ಕಟ್ಟಡಕ್ಕೆ ಶಿಲಾನ್ಯಾಸ ಅವಕಾಶ ನನಗೆ ಲಭಿಸಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾಗ್ಯವೂ ಲಭಿಸಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರಿಗೆ ಹಲವು ಕಾಮಗಾರಿಗಳ ಉದ್ಘಾಟನಾ ಭಾಗ್ಯದೊಂದಿಗೆ ಶಿಲಾನ್ಯಾಸ ಅವಕಾಶವೂ ಲಭಿಸಲಿ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಸೋಮವಾರ ಕುಟುಕಿದ ಪ್ರಸಂಗವೂ ನಡೆಯಿತು. 

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಡೆಗಣಿಸಿ ಮಂಗಳಾದೇವಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ , ಪಶುಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಮತ್ತು ಬಿಜೆಪಿಯ ಜನಪ್ರತಿನಿಧಿಗಳು ನೆರವೇರಿಸಿದ್ದರು. 

ಇದರ ಬೆನ್ನಲ್ಲೆ ಸಚಿವ ದಿನೇಶ್ ಗುಂಡೂರಾವ್ ಅವರು ಮತ್ತೆ ಅದೇ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬಿಜೆಪಿ ಜನಪ್ರತಿನಿಧಿಗಳ ನಡೆಯನ್ನು ಟೀಕಿಸಿದ್ದರು. 

ಇಂದು ಮತ್ತೆ ಮೂವರು ವೇದಿಕೆಯಲ್ಲಿ ಒಂದಾದರು. ಇದೇ ವೇಳೆ ವೇದವ್ಯಾಸ ಕಾಮತ್ ಪರೋಕ್ಷವಾಗಿ ಐವನ್‌ರನ್ನು ಕುಟುಕಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article