ವಿದ್ಯಾರ್ಥಿ ನಾಪತ್ತೆ ಪ್ರಕರಣ-ಪೊಲೀಸ್ ಠಾಣೆಗೆ ಮುತ್ತಿಗೆ: ಶನಿವಾರ ಬಂದ್‌ಗೆ ಕರೆ

ವಿದ್ಯಾರ್ಥಿ ನಾಪತ್ತೆ ಪ್ರಕರಣ-ಪೊಲೀಸ್ ಠಾಣೆಗೆ ಮುತ್ತಿಗೆ: ಶನಿವಾರ ಬಂದ್‌ಗೆ ಕರೆ

ಮಂಗಳೂರು: ಬಂಟ್ವಾಳ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಮುಂದಿನ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಎಡಿಷನಲ್ ಎಸ್ಪಿ ರಾಜೇಂದ್ರ ಅವರ ಜೊತೆ ಪ್ರತಿಭಟನಕಾರರು ಮಾತುಕತೆ ನಡೆಸಿದರು.

ಬಳಿಕ ಫರಂಗಿಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಮಾ.1 ರಂದು ಬೆಳಗ್ಗಿನಿಂದ ಫರಂಗಿಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು. ಈ ಪ್ರತಿಭಟನೆ ಯಶಸ್ವಿಯಾಗಲು ಎಲ್ಲಾ ಸಂಘ ಸಂಸ್ಥೆಗಳು, ಸ್ಥಳೀಯ ಆರು ಗ್ರಾಮಗಳ ಗ್ರಾಮಸ್ಥರು, ವ್ಯಾಪಾರಿಗಳು, ಸಹಕಾರ ನೀಡುವಂತೆ ಕೋರಲಾಯಿತು.

ಈ ಸಂದರ್ಭ ಪ್ರಮುಖರಾದ ಭರತ್ ಕುಮ್ಡೇಲು, ಉಮೇಶ್ ಶೆಟ್ಟಿ ಬರ್ಕೆ, ಪ್ರಸಾದ್ ಕುಮಾರ್, ಮನೋಜ್ ಆಚಾರ್ಯ ನಾಣ್ಯ, ಪದ್ಮನಾಭ ಶೆಟ್ಟಿ ಕಿದೆಬೆಟ್ಟು, ಧನರಾಜ್, ಚಂದ್ರಶೇಖರ ಗಾಂಭೀರ ಮತ್ತಿತರರು ಉಪಸ್ಥಿತರಿದ್ದರು.

ದಿಗಂತ್ ನಾಪತ್ತೆ..

ಮಂಗಳೂರಿನ ಕಪಿತಾನಿಯೋ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್(17) ಫೆ. 25ರಂದು ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬಳಿಕ ನಾಪತ್ತೆಯಾಗಿದ್ದ. ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ಮನೆ ಸಮೀಪದ ರೈಲ್ವೇ ಹಳಿಯಲ್ಲಿ ಬಿದ್ದು ಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಬಾಲಕನ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವ ಕಾರಣ ಹೊರ ಠಾಣೆಗೆ ಮುತ್ತಿಗೆ ಹಾಕಿರುವುದಾಗಿ ಪ್ರತಿಭಟನಕಾರರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article