
ಪಶು ಆಸ್ಪತ್ರೆಗಳಿಗೆ ಚಿಕಿತ್ಸಾ ಪರಿಕರ ಕೊಡುಗೆ
ಮಂಗಳೂರು: ದ.ಕ. ಜಿಲ್ಲೆಯ 9 ಪಶು ಆಸ್ಪತ್ರೆಗಳಿಗೆ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ 20.83 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದೆ.
ಮೂಲ್ಕಿ, ಕಿನ್ನಿಗೋಳಿ, ಮೂಡುಬಿದಿರೆ, ಸುರತ್ಕಲ್, ಬಜ್ಪೆ, ಬಂಟ್ವಾಳ, ಕೋಟೆಕಾರು, ಬೆಳ್ತಂಗಡಿ ಹಾಗೂ ಕಡಬ ಪಶು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ತಾಲೂಕು ಪಂಚಾಯತ್ ಲೆಕ್ಕ ಶೀರ್ಷಿಕೆಯಲ್ಲಿ ಮಾಡಲಾಗಿದ್ದು, ಸದ್ರಿ ಆಸ್ಪತ್ರೆಗಳಿಗೆ ಎಂಆರ್ಪಿಎಲ್ ಸಂಸ್ಥೆಯಿಂದ ಒದಗಿಸಲಾದ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ವಿತರಿಸಲಾಗಿದೆ.
ಈ ಸೌಲಭ್ಯದಿಂದಾಗಿ ರೈತರಿಗೆ ಸ್ಥಳೀಯವಾಗಿ ಜಾನುವಾರು ಹಾಗೂ ಸಾಕು ಪ್ರಾಣಿಗಳ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯನ್ನು ಒದಗಿಸಿದಂತಾಗಿದೆ. ಈ ಹಿಂದೆ ಜಿಲ್ಲಾ ಕೇಂದ್ರ ಮಂಗಳೂರು ಪಾಲಿಕ್ಲಿನಿಕ್ನಲ್ಲಿ ಮಾತ್ರ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು.
ಸುರತ್ಕಲ್ ಪಶು ಆಸ್ಪತ್ರೆಗೆ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಬಾಳಿಗ ನೇತೃತ್ವದಲ್ಲಿ ಕೊಡುಗೆಯಾಗಿ ನೀಡಿದ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಅವರ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಈ ಹಿಂದೆಯೂ ಪಶುಪಾಲನಾ ಇಲಾಖೆ ದ.ಕ. ಜಿಲ್ಲೆ ಎಂಸಿಎಫ್ ಸಂಸ್ಥೆಯಿಂದ 6 ಲಕ್ಷ ರೂ. ವೆಚ್ಚದಲ್ಲಿ ಹಸು ಎತ್ತುವ ಯಂತ್ರವನ್ನು ಪಡೆದಿತ್ತು. ಕೆನರಾ ಬ್ಯಾಂಕಿನಿಂದ 2 ಲಕ್ಷ ರೂ. ವೆಚ್ಚದಲ್ಲಿ 20 ದ್ರವಸಾರಜನಕ ಜಾಡಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 4 ಲಕ್ಷ ರೂ. ವೆಚ್ಚದಲ್ಲಿ 45 ದ್ರವಸಾರಜನಕ ಜಾಡಿಗಳನ್ನು ಪಡೆದಿದುಕೊಂಡಿದೆ.