.jpeg)
ಮಂಗಳೂರು ಮಹಾನಗರ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಖಚಿತ
ಮಂಗಳೂರು: ಮಹಾನಗರ ಪಾಲಿಕೆಯ ಅವಧಿ ಫೆ.27ಕ್ಕೆ ಕೊನೆಯಾಗಲಿದ್ದು, ಆ ಬಳಿಕ ಆಡಳಿತಾಧಿಕಾರಿ ಕಾರುಬಾರು ಖಚಿತ ಎಂದು ಹೇಳಲಾಗುತ್ತಿದೆ.
ಹೊಸ ಚುನಾವಣೆ ನಡೆಸಲು ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ. ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಖಚಿತತೆ ಇಲ್ಲ.
ಪಾಲಿಕೆಗೆ ಮೀಸಲಾತಿ ನಿಗದಿ ಮಾಡುವುದು ಪ್ರತಿಬಾರಿಯೂ ಒಂದು ದೊಡ್ಡ ಸಾಹಸವಾಗುತ್ತಿದೆ. ಈ ಬಾರಿ ಸರಕಾರ ಇನ್ನೂ ಮೀಸಲಾತಿ ನಿಗದಿ ಮಾಡಿಲ್ಲ. ಅದು ನಡೆಯದೆ ಚುನಾವಣೆ ಆಗುತ್ತದೆಯೋ ಎಂಬುದೂ ಅನುಮಾನ. ಆದರೆ ಚುನಾವಣೆಯನ್ನು ಹಿಂದಿನ ಮೀಸಲಾತಿ ಪ್ರಕಾರ ನಡೆಸುತ್ತೇವೆ ಎಂದು ಚುನಾವಣಾ ಆಯೋಗ ಹೇಳಿದೆಯಾದರೂ ಅದರ ಬಗ್ಗೆಯೂ ಖಚಿತತೆ ಇಲ್ಲ.
ಹಲವು ಬಾರಿ ಕಾನೂನು ತೊಡಕು:
ಮಂಗಳೂರು ಸಹಿತ ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಯು ಚುನಾವಣೆ ವಿಷಯದಲ್ಲಿ ಹಲವು ಬಾರಿ ಕಾನೂನು ತೊಡಕುಗಳನ್ನು ಎದುರಿಸಿತ್ತು. ಚುನಾವಣೆ ಮುಂದೂಡಿಕೆ, ದೀರ್ಘ ಕಾಲ ಆಡಳಿತಾಧಿಯಿಂದಲೇ ಆಡಳಿತ, ಮೇಯರ್‌ಗಳಿಗೆ ಸರಿಯಾದ ರೀತಿಯಲ್ಲಿ ಅವಧಿ ಸಿಗದಿರುವುದು ಮುಂತಾದ ಹಲವು ಸಮಸ್ಯೆಗಳಿಗೆ ಬಹುತೇಕ ಪಾಲಿಕೆಗಳು ಸಾಕ್ಷಿಯಾಗಿವೆ.
ಆರೇ ತಿಂಗಳು ಅಧಿಕಾರ:
ಮಂಗಳೂರು ಮಹಾನಗರ ಪಾಲಿಕೆಯ ಹಾಲಿ ಮೇಯರ್ ಮನೋಜ್ ಕುಮಾರ್ ಹಾಗೂ ಉಪ ಮೇಯರ್ ಭಾನುಮತಿ ಅವರಿಗೆ ಕೇವಲ 6 ತಿಂಗಳಷ್ಟೇ ಅಧಿಕಾರ ಸಿಕ್ಕಿದೆ. ಆದರೆ ಈ ಹಿಂದಿನ ಕೆಲವು ಮೇಯರ್‌ಗಳಿಗೆ 1 ವರ್ಷಕ್ಕಿಂತ ಹೆಚ್ಚಿನ ಅವಧಿ ಸಿಕ್ಕಿದೆ. ಇದೆಲ್ಲದಕ್ಕೂ ಪಾಲಿಕೆಗಳು ಎದುರಿಸಿದ ಕಾನೂನು ತೊಡಕುಗಳೇ ಪ್ರಮುಖ ಕಾರಣ.
ಅಭಿವೃದ್ಧಿಗೆ ಹಿನ್ನಡೆ:
ಒಂದೊಮ್ಮೆ ಆಡಳಿತಾಧಿಕಾರಿ ನೇಮಕವಾಗಿ, ದೀರ್ಘ ಕಾಲ ಚುನಾವಣೆ ಬಾಕಿ ಉಳಿದರೆ ಆಗ ಅಭಿವೃದ್ಧಿ ಕಾರ್ಯಗಳಿಗೆ ತುಂಬ ಹಿನ್ನಡೆ ಆಗಲಿದೆ. ಈ ಹಿಂದೆ ಇಂಥ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಜಿ.ಪಂ., ತಾ.ಪಂ.ಗಳಿಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದೆ ಕೆಲವು ವರ್ಷಗಳು ಸಂದಿವೆ. ಒಂದೊಮ್ಮೆ ಚುನಾಯಿತ ಆಡಳಿತ ಮಂಡಳಿ ಇರುತ್ತಿದ್ದರೆ ಈಗ ಎಷ್ಟೋ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು.