
‘ಪರಿಸರ ಅಧ್ಯಯನ ಪಠ್ಯಕ್ರಮ’ ಆನ್‌ಲೈನ್ ಕಾರ್ಯಾಗಾರ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಪಠ್ಯಕ್ರಮ ಮಂಡಳಿ ಸಹಯೋಗದಲ್ಲಿ 2024-25 ಶೈಕ್ಷಣಿಕ ವರ್ಷದ ಪರಿಸರ ಅಧ್ಯಯನ ಪಠ್ಯಕ್ರಮದ ಕುರಿತು ಆನ್‌ಲೈನ್ ಕಾರ್ಯಾಗಾರ ಫೆ.22 ರಂದು ಕಾಲೇಜಿನಲ್ಲಿ ನಡೆಯಿತು.
ಕಾರ್ಯಾಗಾರವನ್ನು ಮಂಗಳೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಪಠ್ಯಕ್ರಮ ಮಂಡಳಿಯ ಅಧ್ಯಕ್ಷ ಪ್ರೊ. ಪ್ರಶಾಂತ ನಾಯಕ್ ಭಾಗವಹಿಸಿ ಪಠ್ಯಕ್ರಮದ ಅವಲೋಕನ ನಡೆಸಿ, ಪಠ್ಯಕ್ರಮದ ಉದ್ದೇಶಗಳು ಮತ್ತು ನಿರಂತರವಾಗಿ ಪರಿಷ್ಕರಣೆಗೊಳ್ಳುವ ಅಗತ್ಯವನ್ನು ವಿವರಿಸಿದರು.
ವಿಶ್ವವಿದ್ಯಾಲಯ ಕಾಲೇಜಿನ ಐಕ್ಯೂಎಸಿ ಹಾಗೂ ಕಾರ್ಯಾಗಾರದ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್. ಅವರು ವಿಭಿನ್ನ ಬೋಧನಾ ಉಪಕರಣಗಳು ಮತ್ತು ವಿಧಾನಗಳ ಕುರಿತು ಮಾತನಾಡಿ, ದೃಶ್ಯ-ಶ್ರವ್ಯ ಉಪಕರಣಗಳ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿ ಸ್ನೇಹಿ ಬೋಧನಾ ವಿಧಾನಗಳನ್ನು ಬಳಸುವ ಮಹತ್ವವನ್ನು ವಿವರಿಸಿದ ಅವರು ಪರಿಸರ ಸಂಬಂಧಿತ ತತ್ವಗಳನ್ನು ಪರಿಣಾಮಕಾರಿಯಾಗಿ ಬೋಧಿಸಲು ಆಕರ್ಷಕ ಬೋಧನಾ ವಿಧಾನಗಳ ಅಗತ್ಯವನ್ನು ತಿಳಿಸಿದರು.
ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ಡಾ. ವಿನಾಯಕ ಕೆ.ಎಸ್. ಅವರು ಪಠ್ಯಕ್ರಮದ ವಿಷಯಗಳ ಕುರಿತು ಮಾತನಾಡಿ, ಪರಿಸರ ಅಧ್ಯಯನದ ಪ್ರಮುಖ ಅಂಶಗಳ ಬಗ್ಗೆ ವಿವರಣೆ ನೀಡಿದರು.
ಕಾರ್ಯಾಗಾರದಲ್ಲಿ ಮಂಗಳೂರು ವಿಶ್ವವಿದ್ಯಾಲಯದ 45ಕ್ಕೂ ಹೆಚ್ಚು ಕಾಲೇಜುಗಳ ಅಧ್ಯಾಪಕರುಗಳು ಭಾಗವಹಿಸಿದ್ದರು.