
ಮಿತಿಮೀರಿದ ಮಾದಕ ದ್ರವ್ಯ ಹಾವಳಿ: ವಿದ್ಯಾರ್ಥಿಗಳ ಬೀದಿ ರಂಪಾಟ
ಮಂಗಳೂರು: ಅಡ್ಯಾರ್ ಬಳಿಯ ವಳಚ್ಚಿಲ್, ಮೇರ್ಲಪದವು ಪರಿಸರದಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಮಿತಿಮೀರಿದ್ದು, ಇದರ ಪರಿಣಾಮವಾಗಿ ಬಾರ್ ಒಂದರ ಹೊರಭಾಗದಲ್ಲಿ ವಿದ್ಯಾರ್ಥಿಗಳ ಬೀದಿ ರಂಪಾಟ ನಡೆದಿದೆ.
ಗಾಂಜಾ ಮತ್ತು ಕುಡಿದ ಮತ್ತಿನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.10ರಂದು ರಾತ್ರಿ 8.30ರ ವೇಳೆಗೆ ಸ್ಥಳೀಯರಾದ ಎಲ್ಡ್ರಿಸ್ ಪಿರೇರಾ ಮತ್ತು ಬ್ಯಾಪ್ಟಿಸ್ಟ್ ಪಿರೇರಾ ಅವರು ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದಾಗ ಅಲ್ಲಿನ ಬಾರೊಂದರ ಹೊರಭಾಗದಲ್ಲಿ ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಯುವಕರು ತೂರಾಡಿಕೊಂಡಿದ್ದರು. ರಸ್ತೆಯಿಂದ ಬೈಕ್ ತೆಗೆಯುವಂತೆ ಹೇಳಿದ್ದಕ್ಕೆ, ಎರಡೂ ಕಡೆಯವರ ನಡುವೆ ಜಟಾಪಟಿ ನಡೆದಿದೆ. ಸ್ಥಳೀಯರು ಸೇರಿ ಬೈಕನ್ನು ಬದಿಗೆ ಸರಿಸಲು ಯತ್ನಿಸಿದ್ದಕ್ಕೆ ಅಲ್ಲಿದ್ದ ಹುಡುಗರು ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಆನಂತರ ಜಗಳ ಬಿಡಿಸಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ, ಇದು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಕೈಚೆಲ್ಲಿದ್ದಾರೆ. ಆಬಳಿಕ ಬಂಟ್ವಾಳ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂದು ಸೇರಿದ್ದ ಯುವಕರನ್ನು ಚದುರಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಳಚ್ಚಿಲ್ ಪದವು ಪರಿಸರದ ಇತರ ಯುವಕರು ಜೊತೆಗೂಡಿ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿದೆ.