
ಶಾಲೆಗಳಿಗೆ ಮತ್ತೆ ಬೆದರಿಕೆ ಸಂದೇಶ
ಮಂಗಳೂರು: ಇತ್ತೀಚೆಗಷ್ಟೇ ನಗರದ ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆನಂತರ, ಪೊಲೀಸರು ತಪಾಸಣೆ ನಡೆಸಿದರೂ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ. ಇದೀಗ ಮತ್ತೆ ಸುರತ್ಕಲ್ ಠಾಣೆ ವ್ಯಾಪ್ತಿಯ ರಾಯನ್ ಇಂಟರ್ ನ್ಯಾಶನಲ್ ಸ್ಕೂಲ್ ಮತ್ತು ಪಾಂಡೇಶ್ವರ ಠಾಣೆ ವ್ಯಾಪ್ತಿಯ ಪ್ರೆಸಿಡೆನ್ಸಿ ಶಾಲೆಗಳಿಗೆ ಬೆದರಿಕೆ ಸಂದೇಶ ಹಾಕಲಾಗಿದೆ.
ಐಇಡಿ ಬಳಸಿ ಮಾನವ ಸಹಿತ ಸುಸೈಡ್ ಬಾಂಬ್ ದಾಳಿ ನಡೆಸುವ ಬೆದರಿಕೆ ಒಡ್ಡಲಾಗಿದೆ. ಎರಡೂ ಕಡೆಯ ಶಾಲೆಗಳಲ್ಲಿ ಪೊಲೀಸರು, ಬಾಂಬ್ ಸ್ಕ್ವಾಡ್ ಗಳು ತಪಾಸಣೆ ನಡೆಸಿದ್ದು, ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಸುರತ್ಕಲ್ ಪೊಲೀಸರ ಪ್ರಕಾರ, ರಾಯನ್ ಸ್ಕೂಲಿಗೆ ಅಣ್ಣಾ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಇತ್ತೀಚೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಉಲ್ಲೇಖಿಸಿ ಬೆದರಿಕೆ ಒಡ್ಡಲಾಗಿದ್ಯಂತೆ. ಈ ಸ್ಕೂಲಿಗೂ ಅಣ್ಣಾ ಯುನಿವರ್ಸಿಟಿಗೂ ಏನು ಸಂಬಂಧ ಅಂತ ಸಂದೇಶದಲ್ಲಿ ತಿಳಿಸಿಲ್ಲ. ಫೆ.11ರ ಮಧ್ಯಾಹ್ನ 1.30ರ ಸುಮಾರಿಗೆ ಎರಡೂ ಕಡೆ ಇಮೇಲ್‌ಗಳು ಬಂದಿದ್ದವು.
ಇತ್ತೀಚೆಗೆ ಮಂಗಳೂರಿನ ನೀರುಮಾರ್ಗದ ಕೇಂಬ್ರಿಜ್ ಸ್ಕೂಲ್, ಪ್ರೆಸಿಡೆನ್ಸಿ ಸೇರಿದಂತೆ ಹಲವು ಶಾಲೆಗಳಿಗೆ ಇಮೇಲ್ ಬೆದರಿಕೆ ಸಂದೇಶಗಳು ಬಂದಿದ್ದವು. ಅದೇ ದಿನ ಉಡುಪಿಯ ಕೆಲವು ಶಾಲೆಗಳಿಗೂ ಬೆದರಿಕೆ ಬಂದಿತ್ತು. ಕೆಲವು ಕಡೆ ಸಿಬಂದಿ ಮತ್ತು ಮಕ್ಕಳು ಹೊರಗೆ ಬಂದು ಗಾಬರಿಪಟ್ಟಿದ್ದರು. ಆನಂತರ, ಪೊಲೀಸರ ತಪಾಸಣೆ ಬಳಿಕ ಹುಸಿ ಕರೆ ಅನ್ನುವುದು ಪತ್ತೆಯಾಗಿತ್ತು.