
ರಸ್ತೆ ಸುರಕ್ಷತಾ ಮಾಸಾಚರಣೆ: ಸಂಚಾರ ನಿಯಮಗಳನ್ನು ಪಾಲಿಸಲು ಕರೆ
ಮಂಗಳೂರು: ಮಂಗಳೂರು ನಗರ ಸಂಚಾರ ಪೊಲೀಸ್, ಮತ್ತು ಸಾರಿಗೆ ಇಲಾಖೆ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಗುರುವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ನಗರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಇಂದು ಚಾಲನೆ ನೀಡಲಾಯಿತು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟಿಸಿದ ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಅವರು ಪ್ರತಿ ವರ್ಷ ರಸ್ತೆ ಸುರಕ್ಷತಾ ಮಾಸಾಚರಣೆ ಮಾಡಲಾಗುತ್ತದೆ. ರಸ್ತೆ ಅಪಘಾತದಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ, ನಿಯಮಗಳಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದರು.
ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಳೆದ ವರ್ಷ ಮಂಗಳೂರಿನಲ್ಲಿ 110 ಮಂದಿ ರಸ್ತೆ ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನಾವು ಅದೃಷ್ಟವಂತರೂ ನಮಗೇನು ಆಗುವುದಿಲ್ಲ ಎಂದು ಯಾವಾಗಲೂ ಇರಬೇಕಿಂದಿಲ್ಲ, ಕೆಲವೊಮ್ಮೆ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಅಪಘಾತವಾಗುತ್ತದೆ. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತವನ್ನು ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.
ಇನ್ನೊಬ್ಬರನ್ನು ಬದುಕಲು ಬಿಡಿ:
ಚಿತ್ರ ನಟ ಅರವಿಂದ ಬೋಳಾರ ಮುಖ್ಯ ಅತಿಥಿಯಾಗಿ ಮಾತನಾಡಿ ಇದೊಂದು ನೆನಪಲ್ಲಿಟ್ಟುಕೊಳ್ಳಬೇಕಾದ ಉತ್ತಮ ಕಾರ್ಯಕ್ರಮ, ನಾವು ಬದುಕಬೇಕು ಮತ್ತು ಇನ್ನೊಬ್ಬರ ಬಗ್ಗೆ ಯೋಚಿಸಬೇಕು. ನಾವು ಸರಿಯಾಗಿದ್ದರೆ ದೇಶ ಸರಿಯಾಗುತ್ತದೆ. ಮಕ್ಕಳಿಗೆ ವಾಹನ ಕೊಡುವಾಗ ಹೆತ್ತವರು ಯೋಚಿಸಬೇಕು. ನಾವು ಸುರಕ್ಷತೆಯ ಕಡೆಗೆ ಗಮನ ಹರಿಸುವ ಮೂಲಕ ಇತರರ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕು. ಪೊಲೀಸ್ ಇಲಾಖೆ ನಮ್ಮ ಜೊತೆಯಲ್ಲಿ ಇದ್ದಾರೆ. ಸಂಚಾರದ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು, ಡ್ರೈವಿಂಗ್ ಮಾಡುವಾಗ ಎಚ್ಚರದಿಂದ ಇರಬೇಕು.ನಮ್ಮಿಂದ ಪ್ರಪಂಚಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದರು.
ಡಿಸಿಪಿ ಸಿದ್ಧಾರ್ಥ್ ಗೋಯಲ್, ಡಿಸಿಪಿ (ಸಿಎಆರ್) ಪಿ. ಉಮೆಶ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಸಾರಿಗೆ ಉಪ ಆಯುಕ್ತ ಶ್ರೀಧರ ಕೆ ಮಲ್ಲಾಡ್, ಫಿಜಾ ಬೈ ನೆಕ್ಸಸ್ ಮಾಲ್ನ ಎಜಿಎಂ ಸುನೀಲ್ ಉಪಸ್ಥಿತರಿದ್ದರು.
ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆಯ ಬಗ್ಗೆ ಬೀದಿ ನಾಟಕ ಕಾರ್ಯಕ್ರಮ ನಡೆಯಿತು
ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಫ್ರಾನ್ಸಿಸ್ ಮಾಕ್ಸಿಮ್ ಮೊರಾಸ್, ಸುನಿಲ್ ಡಿ ಸೋಜ, ರೋಶನ್ ರಾಯ್ ಸಿಕ್ವೇರಾ ಮತ್ತು ರಮೇಶ್ ಕಾವೂರು ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಸಂಚಾರಿ ವಿಷಯಗಳ ಬಗ್ಗೆ ರಸಪ್ರಶ್ನೆ ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು. ಅಪರಾಧ ಡಿಸಿಪಿ(ಅಪರಾಧ ಮತ್ತು ಸಂಚಾರ ವಿಭಾಗ) ರವಿಶಂಕರ್ ಸ್ವಾಗತಿಸಿ, ವಂದಿಸಿದರು.