
ಕೆಲ್ಲಪುತ್ತಿಗೆ: ವಿವೇಕ ಶಾಲಾ ಕೊಠಡಿ, ಕೊರಗರ ಸಮುದಾಯ ಭವನ ಲೋಕಾಪ೯ಣೆಗೊಳಿಸಿದ ಶಾಸಕ ಕೋಟ್ಯಾನ್
Monday, February 3, 2025
ಮೂಡುಬಿದಿರೆ: ವಿವೇಕ ಶಾಲಾ ಯೋಜನೆಯಡಿಯಲ್ಲಿ ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲ್ಲಪುತ್ತಿಗೆಯಲ್ಲಿ 14 ಲಕ್ಷ ರೂ.ನಲ್ಲಿ ನಿರ್ಮಾಣಗೊಂಡಿರುವ ವಿವೇಕ ಶಾಲಾ ಕೊಠಡಿ, 18 ಲಕ್ಷದಲ್ಲಿ ನಿಮಾ೯ಣಗೊಂಡಿರುವ ಆದಿವಾಸಿ ಕೊರಗರ ಸಮುದಾಯ ಭವನ ಮತ್ತು ೫ ಲಕ್ಷ ರೂ.ನಲ್ಲಿ ಅಳವಡಿಸಿರುವ ಸೋಲಾರ್ ದೀಪವನ್ನು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಸೋಮವಾರ ಲೋಕಾಪ೯ಣೆಗೊಳಿಸಿದರು.
ಬಳಿಕ ಅವರು ಮಾತನಾಡಿ, ಬಡ ಮತ್ತು ಮಧ್ಯಮವರ್ಗದ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಕ್ಷೇತ್ರಕ್ಕೆ 40 ರಿಂದ 45 ಕೊಠಡಿಗಳನ್ನು ತರಲಾಗಿದೆ. 30 ಕೊಠಡಿಗಳನ್ನು ಪ್ರಾಥಮಿಕ ಶಾಲೆಗೆ, ಹಾಗೂ ಮುಲ್ಕಿ, ಅಳಿಯೂರು, ಮಿಜಾರು ಭಾಗದ ಪ್ರೌಢಶಾಲೆಗೆ ತಲಾ 1 ಕೋಟಿಯಂತೆ ನಾಲ್ಕು ನಾಲ್ಕು ಶಾಲಾ ಕೊಠಡಿಗಳನ್ನು ನಿರ್ಮಿಸಿ ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಸರಕಾರವು ಎಸ್ಟಿ ಸಮುದಾಯಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಉತ್ತಮವಾದ ಕೊರಗರ ಭವನವನ್ನು ನಿಮಿ೯ಸಲಾಗಿದೆ. ಇಲ್ಲಿ ಕಾಯ೯ಕ್ರಮಗಳನ್ನು ಆಯೋಜಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಿ. ಆ ಜಾತಿ ಈ ಜಾತಿ ಎಂಬ ಮನೋಭಾವವನ್ನು ಬಿಟ್ಟು ಎಲ್ಲರೊಂದಿಗೆ ಬೆರೆಯಿರಿ ಎಂಬ ಕಿವಿ ಮಾತನ್ನು ಹೇಳಿದರು.
ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ಶಾಲಾ ಕೊಠಡಿಯ ಅವಶ್ಯಕತೆ ಇದ್ದದರಿಂದ ಶಾಸಕರಲ್ಲಿ ಮನವಿ ಮಾಡಿದ್ದೆವು. ಇದರಿಂದಾಗಿ ಪಂಚಾಯತ್ ವ್ಯಾಪ್ತಿಯ ಕೆಲ್ಲಪುತ್ತಿಗೆ ಮತ್ತು ಪಣಪಿಲ ಗ್ರಾಮಕ್ಕೆ ಎರಡು ವಿವೇಕ ಕೊಠಡಿ ಮತ್ತು ದರೆಗುಡ್ಡೆಗೆ ಅಂಗನವಾಡಿ ಕಟ್ಟಡವನ್ನು ನೀಡುವ ಮೂಲಕ ಮೂರು ಗ್ರಾಮಗಳಿಗೂ ಸಮಾನವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಹಂಚಿದ್ದಾರೆ. ಇನ್ನೂ ಹಲವಾರು ಬೇಡಿಕೆಗಳಿದ್ದು ಅದನ್ನು ನೆರವೇರಿಸುತ್ತಾರೆಂಬ ಭರವಸೆಯಿದೆ ಎಂದರು.
ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ, ದರೆಗುಡ್ಡೆ ಗ್ರಾ.ಪಂ.ನ ಪಂಚಾಯತ್ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಮುನಿರಾಜ ಹೆಗ್ಡೆ, ತುಳಸಿ ಮೂಲ್ಯ, ದೀಕ್ಷಿತ್ ಪಣಪಿಲ, ಶಿಕ್ಷಣ ಇಲಾಖೆಯ ರಾಜೇಶ್ ಭಟ್, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿರೇಂದ್ರ ಕೋಟ್ಯಾನ್, ಕಾರ್ಯದರ್ಶಿ ಸತ್ಯಭಾಮ, ಶಾಲಾ ಮುಖ್ಯೋಪಾಧ್ಯಾಯ ಡಿಚಾರ್ಡ್ ಡಿಕೋಸ್ತ, ಕೆಲ್ಲಪುತ್ತಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಂದ್ರ ಕೋಟ್ಯಾನ್, ವಜ್ರನಾಭ ಹೆಗ್ಡೆ ದೊಡ್ಡಮನೆ, ಗುತ್ತಿಗೆದಾರ ಪ್ರಶಾಂತ್ ಎಸ್. ಅಮೀನ್, ಆದಿವಾಸಿ ಕೊರಗ ಜನಾಂಗದ ಮುಖಂಡ ಕರಿಯ, ಪಕ್ಷದ ಕಾಯ೯ಕತ೯ರಾದ ಪ್ರಶಾಂತ್ ಕೋಟ್ಯಾನ್, ಪ್ರದೀಪ್ ಕೋಟ್ಯಾನ್, ರಾಜೇಶ್ ಉಪಸ್ಥಿತರಿದ್ದರು.