
ಕವಿಗೆ ಎಲ್ಲರೂ, ಎಲ್ಲವೂ ಆತ್ಮೀಯವಾಗುತ್ತದೆ: ಶಿವಗಿರಿ ಕಲ್ಲಡ್ಕ
ಮೂಡುಬಿದಿರೆ: "ಕವಿಯು ಸಮಾಜದ ಎಲ್ಲಾ ನೋಟಗಳನ್ನೂ ತನ್ನ ಭಾವವೈಶಾಲ್ಯತೆಯಿಂದ ಚಿತ್ರಿಸಿಕೊಳ್ಳುತ್ತಾನೆ.ಆ ಕಾರಣಕ್ಕೇ ಆತನಿಗೆ ಎಲ್ಲರೂ, ಎಲ್ಲವೂ ಆತ್ಮೀಯವಾಗುತ್ತದೆ" ಎಂದು ರಂಗಕರ್ಮಿ, ಚಿತ್ರಕಲಾವಿದ ಶಿವಗಿರಿ ಕಲ್ಲಡ್ಕ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾದ "ಚಿತ್ತ ನೋಟದತ್ತ", ಆಶು ಕವಿತಾ ರಚನಾ ಸ್ಪರ್ಧೆ ಹಾಗೂ ಸಾಹಿತ್ಯ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾವಿದನು ತನ್ನನಿಸಿಕೆಯ ಚಿತ್ರ ರಚಿಸಿದರೆ, ಕವಿ ಅದರೊಳಗೆ ಹೊಕ್ಕು ಭಾವಗಳನ್ನು ಹುಡುಕಾಡಿ ತನ್ನ ವಿಚಾರ ಮಂಥನವನ್ನೂ ಸೇರಿಸಿ ಆ ಚಿತ್ರವನ್ನು ಶ್ರೇಷ್ಠ ವಾಗಿಸುತ್ತಾನೆ. ಆ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಚಿತ್ರಕ್ಕೆ ತಕ್ಕುದಾದ ಆಶುಕವಿತೆ ರಚಿಸುವ ಸ್ಪರ್ಧೆ ವಿಶಿಷ್ಟವಾಗಿದೆ ಎಂದು ಅವರು ಹೇಳಿದರು.
ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ವಕೀಲೆ ಪ್ರಮೀಳಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಹಿತ್ಯ ಚಿಂತನೆಯಲ್ಲಿ ವಿಷಯ ಮಂಡನೆ ಮಾಡಿದ ಅನಿತಾ ಶೆಟ್ಟಿ ಮೂಡುಬಿದಿರೆ "ಸಾಹಿತ್ಯವೆನ್ನುವುದು ಶರಧಿಯಾಗಿ ಅದರ ಆಳಕ್ಕಿಳಿದಷ್ಟೂ ಮುತ್ತು ರತ್ನಗಳ ತೆರನಾದ ಶ್ರೇಷ್ಠತೆಯನ್ನು ಕವಿ ಪಡೆಯುತ್ತಾನೆ.ಆತ ಸಾಹಿತ್ಯದಲ್ಲಿ ಸಂಪೂರ್ಣ ಧ್ಯಾನಸ್ಥನಾದಾಗ ಮಾತ್ರ ಅವನಿಂದ ಉತ್ತಮ ರಚನೆಗಳು ಹೊರಹೊಮ್ಮಲು ಸಾಧ್ಯ" ಎಂದು ಇವರು ಅಭಿಪ್ರಾಯಿಸಿದರು.
ಸಂಗೀತ ನಿರ್ದೇಶಕಿ ಅಶ್ವಿಜ ಶ್ರೀಧರ್ ಕಾರ್ಯಕ್ರಮದ ಆಯೋಜಕರಾಗಿ ಪ್ರಾಸ್ತಾವಿಕ ಮಾತನ್ನಾಡಿದರು. ಸುಮಾರು ಮೂವತ್ತು ಕವಿಗಳು ಆಶು ಕವಿತಾ ರಚನೆಯಲ್ಲಿ ಭಾಗವಹಿಸಿದರು.
ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷರು ವಿಜೇತರನ್ನು ಘೋಷಿಸಿ ಬಹುಮಾನವನ್ನು ವಿತರಿಸಿದರು.ಮೊದಲ ಬಹುಮಾನ ಗುಲಾಬಿ ಸುರೇಂದ್ರ ಸುರತ್ಕಲ್, ದ್ವಿತೀಯ ಬಹುಮಾನ ಕೊಳಚಪ್ಪೆ ಗೋವಿಂದ ಭಟ್ ಹಾಗು ತೃತೀಯ ಬಹುಮಾನ ಶ್ಯಾಮ್ ಪ್ರಸಾದ್ ಭಟ್ ಕಾರ್ಕಳ ಪಡೆದುಕೊಂಡರು. ವಿಜೇತರಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಕೃಷ್ಣ ಶಿರೂರು,ಸಾಹಿತಿ ಸದಾನಂದ ನಾರಾವಿ , ಆಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೃದುಲಾ ತಿಂಗಳಾಯ ಪ್ರಾರ್ಥನೆ ನೆರವೇರಿಸಿದರು. ದೀಪಾ ಸದಾನಂದ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.