
ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ಕೇಂದ್ರಗಳಾಗಲಿ: ಡಾ. ಅರುಣ್ ಉಳ್ಳಾಲ್
ಪೊಳಲಿ: ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರತಿಯೊಂದು ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿ ಹಿಂದೂಗಳ ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸಬೇಕಿದೆ ಎಂದು ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಹೇಳಿದರು.
ಅವರು ಪೊಳಲಿ ಎಸ್.ಆರ್. ಹಿಂದೂ ಫ್ರೆಂಡ್ಸ್ ಇದರ ಅಶ್ರಯದಲ್ಲಿ ಶನಿವಾರ ಸಂಜೆ ಪೊಳಲಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ನಡೆದ ಸಂಸ್ಥೆಯ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣದ ಈ ವರ್ಷ ನಮಗೆ ಅದೃಷ್ಟದ ಸಮಯ, ಈ ಸಂದರ್ಭದಲ್ಲಿ ನಾವು ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋದನ್, ನಾಗರೀಕ ಶಿಷ್ಟಚಾರಗಳ ಮೂಲಕ ಪರಿವರ್ತನೆಯ ಹಾದಿಯಲ್ಲಿ ಸಾಗಬೇಕಿದೆ, ಮನಸ್ಥಿತಿ ಬದಲಾದರೆ ಮನೆ ಸ್ಥಿತಿ ಬದಲಾಗುತ್ತದೆ, ಧರ್ಮ, ರಾಷ್ಟ್ರೀಯತೆಯ ಪ್ರೇರಣೆಯೊಂದಿಗೆ ಸಮಾಜ ಮುಖಿ ಸೇವೆ ಮಾಡುವ ಎಸ್ ಅರ್ ಫ್ರೆಂಡ್ಸ್ ಸಂಘಟನೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಾಚನಗೈದು, ತ್ಯಾಗ ಮತ್ತು ಸೇವೆ ಈ ದೇಶದ ಅಡಿಗಲ್ಲು, ಜಗತ್ತಿನ ಉದ್ದಾರ ಮಾಡುವ, ಸಮಾಜವನ್ನು ದುಶ್ಚಟಗಳಿಂದ ಮುಕ್ತ ಮಾಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವ ಕಾರ್ಯವನ್ನು ಸಂಘಟನೆಗಳು ಮಾಡಬೇಕು, ಧರ್ಮದ ಅನುಷ್ಠಾನ ಕಟ್ಟುನಿಟ್ಟಾಗಿ ಪಾಲಿಸಿ ಧರ್ಮ ಪ್ರಜ್ಞೆಯನ್ನು ಬೆಳೆಸಿ ಹಿಂದೂ ಸಮಾಜ ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸಂಘಟನೆಯ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಶಾರದಾ ಟೀಚರ್, ಸುಬ್ರಾಯ ಕಾರಂತ, ಡಾ. ಪುಷ್ಪರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಚಿಂತನ್ ಪೂಜಾರಿ, ಭೂಷಣ್ ಪೂಜಾರಿ, ಮಾನ್ಯ ಅವರನ್ನು ಅಭಿನಂದಿಸಲಾಯಿತು. ಎಸ್.ಅರ್. ಹಿಂದೂ ಫ್ರೆಂಡ್ಸ್ ಸಂಘಟನೆಯ ರೂವಾರಿ ವೆಂಕಟೇಶ್ ನಾವಡ ದಂಪತಿ, ಕೋಶಾಧಿಕಾರಿ ಪ್ರಶಾಂತ್ ಕುಲಾಲ್ ಅಮ್ಮುಂಜೆ ಅವರನ್ನು ಗೌರವಿಸಲಾಯಿತು. ಐದು ಬಡ ಕುಟುಂಬಗಳಿಗೆ ಧನಸಹಾಯ ವಿತರಿಸಲಾಯಿತು.
ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಬಿ.ಸಿ.ರೋಡಿನ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಉಡುಪಿ ಪೊಲೀಸ್ ಇನ್ಸ್‌ಪೆಕ್ಟರ್ ಸೌಮ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ನಿವೃತ್ತ ಸೇನಾನಿ ಅನಿಶ್ ಆಚಾರ್ಯ, ಬೀಡಿ ಉದ್ಯಮಿ ಭುವನೇಶ್ ಪಚ್ಚಿನಡ್ಕ, ಉದ್ಯಮಿ ಸುಕೇಶ್ ಚೌಟ, ಅರ್ಚಕ ಅನಂತ ಪದ್ಮನಾಭ ಭಟ್, ಕರಿಯಂಗಳ ಗ್ರಾ.ಪಂ. ಮಾಜಿ ಸದಸ್ಯ ಕಿಶೋರ್ ಪಾಲ್ಲಿಪಾಡಿ, ಎಸ್.ಅರ್. ಹಿಂದೂ ಫ್ರೆಂಡ್ಸ್‌ನ ಅಧ್ಯಕ್ಷ ಅಜಿತ್ ಪೊಳಲಿ ಉಪಸ್ಥಿತರಿದ್ದರು.
ವೆಂಕಟೇಶ್ ನಾವಡ ಸ್ವಾಗತಿಸಿ, ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕು ಮೊದಲು ಪೊಳಲಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯ ಶಾಲಾ ಮಕ್ಕಳ ಸಂಸ್ಕೃತಿಕ ವೈವಿದ್ಯ, ನಂತರ ಸಂಗೀತ ರಸ ಸಂಜೆ, ತುಳು ನಾಟಕ ಪ್ರದರ್ಶನಗೊಂಡಿತು.