
ಎನ್‌ಎಸ್‌ಎಸ್ ವಾರ್ಷಿಕ ಶಿಬಿರಕ್ಕೆ ಚಾಲನೆ
ಪುತ್ತೂರು: ಡಿಜಿಟಲ್ ಸಾಕ್ಷರತೆಗಾಗಿ ‘ಯುವಜನತೆ-ನನ್ನ ಭಾರತಕ್ಕಾಗಿ ಯುಜಜನತೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ 2024-25ನೇ ಸಾಲಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವು ಫೆ.20 ರಿಂದ 26 ರವರೆಗೆ ಸ.ಹಿ.ಪ್ರಾ. ಶಾಲೆ ಆನಡ್ಕ ಇಲ್ಲಿ ನಡೆಯುತ್ತಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.
ಕಾಲೇಜಿನ ಬಗ್ಗೆ ವಿಶೇಷವಾದ ಗೌರವ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ ಪ್ರಗತಿಪರ ಕೃಷಿಕರು ಹಾಗೂ ಸ.ಹಿ.ಪ್ರಾ. ಶಾಲೆ ಆನಡ್ಕ ಇದರ ಸ್ಥಾಪಕಧ್ಯಕ್ಷ ರತ್ನಾಕರ ವಾರಂಬಳಿತ್ತಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ‘ಊರಿನವರೊಂದಿಗೆ ಪ್ರೀತಿ ವಿಶ್ವಾಸ ಹಂಚಿಕೊಳ್ಳಲು ಒಂದು ಉತ್ತಮ ಅವಕಾಶವಿದು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಅವರು ‘ಎನ್‌ಎಸ್‌ಎಸ್ ಎನ್ನುವುದು ಬದುಕುವ ಕಲೆಯನ್ನು, ಹೊಂದಿಕೊಂಡು ಬಾಳುವುದನ್ನು ಕಲಿಸುತ್ತದೆ’ ಎನ್ನುತ್ತಾ ಶಿಬಿರಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಗೌಡ ಮಜಲು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕರು ಹಾಗೂ ದಾನಿಗಳ ಪ್ರತಿನಿಧಿ ಬಾಲಕೃಷ್ಣ ನಾಯಕ್ ಮಜಲು ಇವರು ಶಿಬಿರಕ್ಕೆ ಸಂಪೂರ್ಣ ಸಹಕಾರದ ಅಭಯವನ್ನು ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಸುವರ್ಣ, ಸ.ಹಿ.ಪ್ರಾ. ಶಾಲೆ ಆನಡ್ಕ ಇದರ ಮುಖ್ಯಗುರು ಫೆಲ್ಸಿಟಾ ಡಿಕುನ್ಹ ಹಾಗೂ ನಾಟಿವೈದ್ಯರು ಮತ್ತು ಸ.ಹಿ.ಪ್ರಾ. ಶಾಲೆ ಆನಡ್ಕ ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರ್ಣಪ್ಪ ಸಾಲಿಯಾನ್, ಸಂತ ಫಿಲೋಮಿನಾ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ, ಸಹಪ್ರಾಧ್ಯಾಪಕರುಗಳಾದ ಡಾ. ರಾಧಾಕೃಷ್ಣ ಗೌಡ ವಿ., ವಿನಿಲ್ ರೋಹನ್ ಡಿಸೋಜಾ, ಸಹ ಶಿಬಿರಾಧಿಕಾರಿ ಹರ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಸ್ವಾಗತಿಸಿ, ಪುಷ್ಪ ಎನ್. ವಂದಿಸಿದರು. ವಿದ್ಯಾರ್ಥಿಗಳಾದ ಅರ್ಚನಾ ಮತ್ತು ಬಳಗದವರು ಪ್ರಾರ್ಥಿಸಿ, ಘಟಕ ನಾಯಕಿಯಾದ ಕಾವ್ಯ ಎಚ್. ರಾವ್ ನಿರೂಪಿಸಿದರು. ನಿರಂಜನ್, ಉಮಾ, ಕೀರ್ತಿ ಮೊದಲಾದವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.