
ಬಂಟಾಜೆ ರಕ್ಷಿತಾರಣ್ಯಕ್ಕೆ ಚಿರತೆ...! ಗಡಿ ಪ್ರದೇಶದಲ್ಲಿನ ಜನತೆಗೆ ಆತಂಕ
ಪುತ್ತೂರು: ಕೇರಳದ ಕಾಸರಗೋಡು ಜಿಲ್ಲೆಯ ಬೇಡಡ್ಕ ಎಂಬಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದ ಹೆಣ್ಣು ಚಿರತೆಯನ್ನು ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಂಟಾಜೆ-ಜಾಂಬ್ರಿ ಕಾಡು ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಿಂದ ಪುತ್ತೂರು ತಾಲೂಕಿನ ಪಾಣಾಜೆ ಸುಳ್ಯ ತಾಲೂಕಿ ಎಣ್ಮಕಜೆ, ಬೆಳ್ಳೂರು ಭಾಗದ ಜನತೆಯ ಆತಂಕಕ್ಕೆ ಈಡಾಗಿದ್ದಾರೆ.
ಬೇಡಡ್ಕದ ಕೊಳತ್ತೂರು ಎಂಬಲ್ಲಿನ ಜನಾರ್ಧನನ್ ಎಂಬವರ ರಬ್ಬರ್ ತೋಟದಲ್ಲಿ ಭಾನುವಾರ ರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಸಿಲುಕಿತ್ತು. ಇದನ್ನು ಅರಣ್ಯ ಇಲಾಖೆ ಸಿಬಂದಿಗಳು ಬಂಟಾಜೆ ರಕ್ಷಿತಾರಣ್ಯದಲ್ಲಿ ತಂದು ಬಿಟ್ಟಿದ್ದಾರೆ ಎಂದು ಸುದ್ದಿ ಹರಡಲಾಗುತ್ತಿದೆ. ಇದಕ್ಕೆ ಪೂರಕವಾದ ಒಂದಷ್ಟು ಸಿಸಿ ಟಿವಿ ದೃಶ್ಯಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದು ಜನರನ್ನು ಭಯಭೀತಗೊಳಿಸಿದೆ.
ಅರಣ್ಯ ಇಲಾಖೆಗೆ ಸಂಬಂಧಿಸಿದ ಚಿರತೆ ಇದ್ದ ಬೋನನ್ನು ಬಂಟಾಜೆ ಪರಿಸರಕ್ಕೆ ತಂದಿರುವ ಕುರಿತು ಸಿಸಿ ಟಿವಿ ದೃಶ್ಯಗಳು ವೈರಲ್ ಆಗಿದ್ದು, ಬೋನಿನಲ್ಲಿ ಬಿದ್ದ ಚಿರತೆಯನ್ನು ಜಿಲ್ಲೆಯ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಚಿರತೆಯನ್ನು ಬಿಟ್ಟಿರುವ ಸ್ಥಳದ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇದರಿಂದಾಗಿ ಹಲವು ವದಂತಿಗಳು ಜಾಲತಾಣದಲ್ಲಿ ಹರಡಲಾರಂಭಿಸಿವೆ. ಇದರಿಂದ ಗಡಿ ಪ್ರದೇಶದ ಜನತೆಯಲ್ಲಿ ಸಹಜವಾಗಿ ಭೀತಿ ಆರಂಭವಾಗಿದೆ.