ದಲಿತರ ಹಣ ಕಬಳಿಕೆ: ಬಿಜೆಪಿ ಪ್ರತಿಭಟನೆ

ದಲಿತರ ಹಣ ಕಬಳಿಕೆ: ಬಿಜೆಪಿ ಪ್ರತಿಭಟನೆ


ಉಡುಪಿ: ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ದಲಿತ ಸಮುದಾಯದ ಅಭಿವೃದ್ಧಿ ಮಾಡುವುದರಲ್ಲಿ ನಾನೇ ಚಾಂಪಿಯನ್ ಎನ್ನುತ್ತಾ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಅದೇ ಸಮುದಾಯಕ್ಕೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಇದು ಮಕ್ಬಲ್ ಟೋಪಿ ಸರಕಾರ ಎಂದು ವ್ಯಂಗ್ಯವಾಡಿದರು.

ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಮಾಡಿದಷ್ಟು ದೊಡ್ಡ ದ್ರೋಹ ಬೇರೆ ಯಾವ ಮುಖ್ಯಮಂತ್ರಿಗಳೂ ಮಾಡಿಲ್ಲ. ಕಾಂಗ್ರೆಸ್ ಹಿಂದಿನಿಂದಲೂ ದಲಿತ ವಿರೋಧಿ ಧೋರಣೆಯನ್ನೇ ಅನುಸರಿಸಿಕೊಂಡು ಬಂದಿದೆ. ನಿಗಮಗಳಿಗೆ ನೀಡುತ್ತಿರುವ ಅನುದಾನದಲ್ಲೂ ಕಡಿತ ಮಾಡಿದೆ. ಎಲ್ಲ ನಿಗಮಗಳಲ್ಲೂ ಶೇ.25ಕ್ಕಿಂತ ಹೆಚ್ಚು ಅನುದಾನ ಬಳಕೆಯೇ ಮಾಡಿಲ್ಲ. ಈ ಬಾರಿ ದಲಿತರ ಹಣಕ್ಕೆ ಕೈಹಾಕಿದರೆ ಸುಮ್ಮನೆ ಕೂರುವುದಿಲ್ಲ. ಇನ್ನಷ್ಟು ದೊಡ್ಡ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಿಜೆಪಿ ಮುಖಂಡರಿಂದ ಮನವಿ ಸ್ವೀಕರಿಸಿದರು.

ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಸಾಬು ದೊಡ್ಮನಿ, ಗೋಪಾಲ್ ಘಟ್ ಕಾಂಬಳೆ ಮತ್ತು ದಿನಕರಬಾಬು, ಮಾಜಿ ಶಾಸಕ ಹರ್ಷವರ್ಧನ್, ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಓದೋ ಗಂಗಪ್ಪ, ದೀಪಕ್ ದೊಡ್ಡಯ್ಯ, ದಿನಕರ ಶೆಟ್ಟಿ ಹೆರ್ಗ, ಪ್ರಭಾಕರ ಪೂಜಾರಿ, ಚಂದ್ರ ಪಂಚವಟಿ, ಪ್ರಭಾಕರ ವಿ., ಉದಯ ಕುಮಾರ್, ರವೀಂದ್ರ, ಸುಮಾ ನಾಯ್ಕ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article