
ರಾಜ್ಯ ಸರ್ಕಾರ ವಜಾಗೊಳಿಸಲು ಆಗ್ರಹ
ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜನತೆಗೆ ರಕ್ಷಣೆ ಕೊಡಲಾಗದ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಮೈಸೂರಿನ ಉದಯಗಿರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯ ಮುಂದುವರಿದ ಭಾಗವಾಗಿ ಫೆ.10ರ ರಾತ್ರಿ ಪೋಲಿಸ್ ಠಾಣೆಗೆ ನುಗ್ಗಿ , ಪೋಲಿಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, 7 ಮಂದಿ ಪೋಲಿಸ್ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡಿರುವುದು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ.
ಈ ಘಟನೆ ಕೆ.ಜಿ ಹಳ್ಳಿ ,ಡಿ.ಜೆ. ಹಳ್ಳಿ ಮಾದರಿಯ ಪೂರ್ವ ನಿಯೋಜಿತ ಘಟನೆಯಂತೆ ತೋರುತ್ತಿದ್ದು, ಈ ಘಟನೆಯ ಹಿಂದಿರುವ ಮತೀಯ ಶಕ್ತಿಗಳು ಯಾವುವು? ಇಂಥ ಘಟನೆ ನಂತರವೂ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಮತ್ತಷ್ಟು ಪ್ರಚೋದನೆ ನೀಡಿದಂತಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಸಾಮಾನ್ಯರ ಗತಿ ಏನು? ಒಟ್ಟಾರೆಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ ಮತ್ತು ಶಶಾಂಕ್ ಶಿವತ್ತಾಯ, ಉಪಾಧ್ಯಕ್ಷ ಸಚಿನ್ ಪಿತ್ರೋಡಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ನಗರ ಯುವ ಮೋರ್ಚಾ ಕಾರ್ಯದರ್ಶಿ ಧನುಷ್ ಶೆಟ್ಟಿ, ಕಾರ್ಯಾಲಯ ಕಾರ್ಯದರ್ಶಿ ಭೂಷಣ್, ಅಜಿತ್ ಜೋಗಿ ಉಪಸ್ಥಿತರಿದ್ದರು.