
ಡಾಂಬರ್‌ನಲ್ಲಿ ಸಿಲುಕಿದ ಶ್ವಾನದ ರಕ್ಷಣೆ
ಉಡುಪಿ: ಕಳೆದ ಐದು ದಿನಗಳಿಂದ ಡಾಂಬರ್‌ನಲ್ಲಿ ಸಿಲುಕಿದ ಶ್ವಾನ (ನಾಯಿ)ವನ್ನು ವಿಶುಶೆಟ್ಟಿ ಅಂಬಲಪಾಡಿ, ಹರೀಶ್ ಉದ್ಯಾವರ ನೆರವಿನಿಂದ ಬಹಳ ಶ್ರಮಪಟ್ಟು ಶನಿವಾರ ರಕ್ಷಿಸಿದ್ದಾರೆ. ಸ್ಥಳೀಯರಾದ ಸುರೇಶ ಸಹಕರಿಸಿದ್ದಾರೆ.
ಆದಿವುಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಮರೀಕರಣ ನಡೆಯುತ್ತಿದ್ದು, ಗೋಡೌನ್‌ನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿ ಸ್ಥಳದಲ್ಲಿ ಪಸರಿಸಿತು. ಶ್ವಾನವೊಂದು ಡಾಂಬರ್‌ನಲ್ಲಿ ಬಿದ್ದು ಏಳಲಾರದೆ ಕಳೆದ ಐದು ದಿನಗಳಿಂದ ಒದ್ದಾಡುತ್ತಿರುವ ಮಾಹಿತಿ ಪಡೆದ ವಿಶು ಶೆಟ್ಟಿ ಸ್ಥಳಕ್ಕೆ ಹರೀಶ್ ಉದ್ಯಾವರ ಜೊತೆಗೆ ಆಗಮಿಸಿ ಡಬ್ಬಿಗಳ ನಡುವೆ ಡಾಂಬರ್‌ನಲ್ಲಿ ಸಿಲುಕಿದ್ದ ಶ್ವಾನವನ್ನು ಬಹಳ ಪ್ರಯಾಸದಿಂದ ರಕ್ಷಿಸಿದರು.
ಡಬ್ಬಿಯನ್ನು ವಿಶುಶೆಟ್ಟಿ ವಾಹನಕ್ಕೆ ಕಟ್ಟಿ ಎಳೆದು ತಂದನಂತರ ತೆಂಗಿನ ಎಣ್ಣೆಯನ್ನು ಸುರಿದು ನಾಯಿಯನ್ನು ರಕ್ಷಿಸುವಲ್ಲಿ ಹರೀಶ್ ಉದ್ಯಾವರ ಯಶಸ್ವಿಯಾಗಿದ್ದಾರೆ.
ಡಾಂಬರಿನ ಕಾಮಗಾರಿ ಹಾಗೂ ದಾಸ್ತಾನು ಸಂದರ್ಭ ಡಾಂಬರ್ ಸೋರದಂತೆ ಜಾಗ್ರತೆ ವಹಿಸಿ ಹಾವು ಹಾಗೂ ಮೂಕಪ್ರಾಣಿಗಳಿಗೆ ತೊಂದರೆ ಆಗದಂತೆ ಸಹಕರಿಸುವಂತೆ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.