
ದರೋಡೆ ಪ್ರಕರಣ: ಬಚ್ಚಿಟ್ಟಿದ್ದ ಪಿಸ್ತೂಲು ಪತ್ತೆ
ಉಳ್ಳಾಲ: ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಅಜ್ಜಿನಡ್ಕ ಬಳಿ ಬಚ್ಚಿಟ್ಟಿದ್ದ ಪಿಸ್ತೂಲು ಶನಿವಾರ ರಾತ್ರಿ ಪತ್ತೆಯಾಗಿದೆ.
ಅಜ್ಜಿನಡ್ಕ ಬಳಿ ಶಶಿ ಥೇವರ್ ಪಿಸ್ತೂಲು ಬಚ್ಚಿಟ್ಟಿರುವ ವಿಚಾರವನ್ನು ಆರೋಪಿ ಮುರುಗನ್ ಡಿ ಥೇವರ್ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಮುರುಗನ್ ಡಿ ಥೇವರ್ ಎಂಬಾತನನ್ನು ಪೊಲೀಸರು ಶನಿವಾರ ಮಹಜರು ನಡೆಸಲು ಅಜ್ಜಿನಡ್ಕ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತ ಪೊಲೀಸ್ ಕಾನ್ಸ್‌ಟೇಬಲ್ ಮಂಜುನಾಥ್ ಅವರ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಉಳ್ಳಾಲ ಇನ್ಸ್‌ಪೆಕ್ಟರ್ ಬಾಲಕೃಷ್ಣ ಗಾಳಿಯಲ್ಲಿ ಗುಂಡಿನ ದಾಳಿ ಮಾಡಿದ್ದರು.
ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಪೊಲೀಸರು ಅಜ್ಜಿನಡ್ಕ ಬಳಿ ಬಚ್ಚಿಟ್ಟಿರುವ ಪಿಸ್ತೂಲು ಪತ್ತೆ ಹಚ್ಚಲು ಶೋಧ ನಡೆಸಿದಾಗ ಅಜ್ಜಿನಡ್ಕದ ಗುಡ್ಡದ ಬಳಿ ಕಲ್ಲಿನ ನಡುವೆ ಮಣ್ಣು ಶೇಖರಿಸಿ ಅದರ ನಡುವೆ ಇಟ್ಟಿದ್ದ ಪಿಸ್ತೂಲು ಪತ್ತೆಯಾಗಿದೆ. ಪಿಸ್ತೂಲುನ್ನು ಮೂರು ಪ್ಲಾಸ್ಟಿಕ್ ಕವರ್‌ನಲ್ಲಿ ಜೋಪಾನವಾಗಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯವನ್ನು ಈ ಬಂಧಿತ ಆರೋಪಿಗಳ ಜೊತೆ ಶಶಿ ಥೇವರ್ ಮಾಡಿಟ್ಟಿರಬೇಕು. ಶಶಿ ಥೇವರ್ ಇದೇ ಊರಿನ ವ್ಯಕ್ತಿ ಆಗಿದ್ದು, ಹೆಸರು ಬದಲಾಯಿಸಿ ಕೊಂಡಿದ್ದಾನೆ. ಆತನ ಬಂಧನ ಆದಲ್ಲಿ ಎಲ್ಲಾ ವಿಚಾರಗಳು ಬಹಿರಂಗವಾಗಲಿದೆ.
ಮುಂಬೈಗೆ ತಂಡ:
ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಮುಂಬೈನಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರ ಒಂದು ತಂಡ ಮುಂಬೈಗೆ ತೆರಳಿದೆ. ಈ ದರೋಡೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಿದ್ದು, ಇನ್ನು ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.