
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ 28 ದಿನಗಳ ಜಾತ್ರಾ ಮಹೋತ್ಸವಕ್ಕೆ ದಿನ ನಿಗದಿ
ಬಂಟ್ವಾಳ: ಸುದೀರ್ಘ ಒಂದು ತಿಂಗಳ ಕಾಲ ನಡೆಯುವ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ.14 ರಿಂದ ಎ.11 ತನಕ 28 ದಿನಗಳ ಕಾಲ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಾ. 14ರಂದು ರಾತ್ರಿ ಧ್ವಜಾರೋಹಣ ನಡೆದಿದ್ದು, ಶನಿವಾರ ಬೆಳಗ್ಗೆ ಕುದಿ ಕರೆಯುವ ಸಂಪ್ರದಾಯ ನೆರವೇರಿತು. ಈ ಸಲ 28 ದಿನಗಳ ಜಾತ್ರೆ ನಡೆಯುವುದು ಎಂದು ಘೋಷಿಸಲಾಯಿತು.
ಎ.5 ಕೊಡಿ ಚೆಂಡು, ಕುಮಾರ ರಥ, ಎ.6 ಎರಡನೇ ಚೆಂಡು, ಹೂವಿನ ತೇರು, ಎ.7 ಮೂರನೇ ಚೆಂಡು, ಸೂರ್ಯಮಂಡಲ, ಎ.8 ನಾಲ್ಕನೇ ಚೆಂಡು, ಚಂದ್ರಮಂಡಲ, ಎ.9 ಕಡೇ ಚೆಂಡು ಬೆಳ್ಳಿರಥ, ಆಳುಪಲ್ಲಕಿ ರಥ, ಎ.10 ರಂದು ಮಹಾರಥೋತ್ಸವ, ಎ.11 ಆರಾಡ ಅವಭ್ಯತ ಸ್ನಾನ, ಮಗ್ರಂತಾಯ ನೇಮ, ಎ.12 ನೇಮೋತ್ಸವ ಪ್ರಧಾನ ದೈವ ಶ್ರೀ ಕೊಡಮಣಿತ್ತಾಯ ನೇಮ ನಡೆಯಲಿದೆ.
ಪೊಳಲಿ ಕ್ಷೇತ್ರದ ಧ್ವಜಾರೋಹಣಕ್ಕೆ ಮುನ್ನಾ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರ ಹಾಗೂ ಉಳಿಪ್ಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು.
ಜಾತ್ರೆಯ ಹಿನ್ನೆಲೆ ನಟ್ಟೋಜಿ ವಂಶದ ಮನೆನತನದವರು ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಷರಲ್ಲಿಗೆ ತೆರಳಿ ಅಲ್ಲಿ ದಿನ ನಿಗದಿ ಮಾಡಿ ಪೊಳಲಿಗೆ ಆಗಮಿಸುತ್ತಾರೆ. ಕಂಚಿಲ್ (ಕಂಚುಬೆಳಕು) ಸೇವೆ ನಡೆದ ಬಳಿಕ ಕುದಿ ಲೆಪ್ಪುನಿ(ಕುದಿ ಕರೆಯುವುದು) ಎಂಬ ಸಂಪ್ರದಾಯದ ಮೂಲಕ ತುಳುವಿನಲ್ಲಿ ಮೂರು ಬಾರಿ ಜೋರಾಗಿ ಆರಾಡದ ದಿನವನ್ನು ಘೋಷಿಸಲಾಗುತ್ತದೆ.
ಆರಾಡದ ಮುನ್ನಾದಿನ ಮಹಾರಥೋತ್ಸವ, ಅದರ ಹಿಂದಿನ ದಿನದವರೆಗೆ 5 ದಿನಗಳ ಪುರಾಲ್ಡ್ ಚೆಂಡು ಖ್ಯಾತಿಯ ಚೆಂಡಿನ ಉತ್ಸವ ನಡೆಯಲಿದೆ. ಇದರ ಎಲ್ಲ ದಿನಗಳು ಆರಾಡದ ದಿನದ ಮೂಲಕ ನಿರ್ಧಾರವಾಗುತ್ತದೆ.
ಜಾತ್ರಾ ಸಮಯದಲ್ಲಿ ತೀಯಾ ಸಮಾಜದವರಿಗೆ ಒಂದು ವಿಶಿಷ್ಟ ಸೇವೆ ಸಲ್ಲಿಸುವ ಅವಕಾಶವಿದ್ದು, ಧ್ವಜಾರೋಹಣದ ದಿನ ರಾತ್ರಿ ಶ್ರೀ ಭಗವತಿ ತೀಯಾ ಸಮಾಜ ಕೇಂದ್ರ ಸ್ಥಳವಾದ ಶ್ರೀ ನಂದ್ಯ ಕ್ಷೇತ್ರದಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸುತ್ತದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಹಾಗೂ ಸ್ಥಳೀಯ ಪ್ರಮುಖರು, ನೂರಾರು ಸಂಖ್ಯೆಯಲ್ಲಿ ಸಾವಿರಸೀಮೆಯ ಭಕ್ತರು ಸೇರಿದ್ದರು.