
ಇರ್ವತ್ತೂರು ಪದವು ಶ್ರೀ ಶಾರದ ಸೇವಾಟ್ರಸ್ಟ್‌ನಿಂದ ಮೂಡುಪಡುಕೋಡಿ ಸ.ಉ.ಮಾ.ಹಿ.ಪ್ರಾ. ಶಾಲೆಯ ದತ್ತು ಸ್ವೀಕಾರ
ಬಂಟ್ವಾಳ: ತಾಲೂಕಿನ ಇರ್ವತ್ತೂರುಪದವು ಮತ್ತು ಮೂಡುಪಡುಕೋಡಿ ಪರಿಸರದಲ್ಲಿ ಕಳೆದ ಎಂಟು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡು ತನ್ನದೇ ಆದ ಛಾಪನ್ನು ಮೂಡಿಸಿರುವ ಇರ್ವತ್ತೂರು ಪದವಿನ ಶ್ರೀ ಶಾರದ ಸೇವಾಟ್ರಸ್ಟ್ (ರಿ) ಇದೀಗ ಮೂಡುಪಡುಕೋಡಿ ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದೆ.
ಈ ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಟ್ರಸ್ಟ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ತಾಲೂಕಿನಲ್ಲೇ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ದತ್ತುಸ್ವೀಕರಿಸಿದೆ. ಟ್ರಸ್ಟ್‌ನ ಈ ನಿರ್ಧಾರಕ್ಕೆ ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಕೂಡ ಸಹಮತ ವ್ಯಕ್ತಪಡಿಸಿದೆ.
ಟ್ರಸ್ಟ್ ದತ್ತುಸ್ವೀಕರಿಸುವ ಮುನ್ನವೇ ಹಲವು ವರ್ಷಗಳಿಂದ ಶಾಲೆಗೆ ಶಿಕ್ಷಕಿ ನೇಮಕ, ಶಾಲಾ ಮುಂಭಾಗ ಮಕ್ಕಳ ಸುರಕ್ಷತೆಗಾಗಿ ಬ್ಯಾರಿಕೇಡ್ ರಚನೆ, ಪ್ರತಿವರ್ಷ ಶಾಲೆಯಲ್ಲಿ ವನಮಹೋತ್ಸವ ಆಚರಿಸಿ ವಿದ್ಯಾರ್ಥಿಗೊಂದು ಸಸಿ ವಿತರಣೆ, ಎಲ್.ಕೆ.ಜಿ., ಯುಕೆಜಿ ಮಕ್ಕಳಿಗೆ ಪ್ರತಿದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ, ಶಾಲಾ ವಾರ್ಷಿಕೋತ್ಸವದಲ್ಲಿ ಸಹಭಾಗಿತ್ವ, ಕಳೆದ 9 ವರ್ಷಗಳಿಂದ ಶಾಲೆಯಲ್ಲಿ ಶ್ರೀ ಶಾರದೋತ್ಸವ ಆಚರಿಸಿ ಮಕ್ಕಳಿಗೆ ಪ್ರತಿಭಾಪುರಸ್ಕಾರ, ದಸರಾ ಕ್ರೀಡಾಕೂಟದ ಆಯೋಜನೆ, ಎನ್‌ಎಸ್‌ಎಸ್ ಶಿಬಿರದಲ್ಲಿ ಸಹಭಾಗಿತ್ವ, ರಕ್ತದಾನ, ಉಚಿತ ನೇತ್ರ, ದಂತ ಸಹಿತ ಆರೋಗ್ಯ ಶಿಬಿರಗಳು, ಕ್ಯಾನ್ಸರ್ ಕುರಿತ ಜಾಗೃತಿ ಶಿಬಿರ ಹಾಗೂ ಶಿಕ್ಷಣ ಇಲಾಖೆಯಿಂದ ನಡೆಯವಂತ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಯಲ್ಲಿ ಸಹಭಾಗಿತ್ವದ ಜೊತೆಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ.
ಭವಿಷ್ಯದಲ್ಲಿ ಶಾಲೆಗೆ ಬಯಲು ರಂಗಮಂದಿರ ನಿರ್ಮಾಣ, ಪರೀಕ್ಷಾ ಸಿದ್ದತಾ ಶಿಬಿರ, ಮಕ್ಕಳಿಗೆ ಬೇಸಿಗೆ ಶಿಬಿರ, ಯೋಗ, ಭರತನಾಟ್ಯ, ಕರಾಟೆ, ಮಳೆನೀರುಕೊಯ್ಲು ಸೇರಿದಂತೆ ಶಾಲೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಮಕ್ಕಳ ಸಮಗ್ರ ವಿಕಸನಕ್ಕೆ ಪೂರಕವಾದ ಯೋಜನೆಗಳನ್ನು ಶ್ರೀ ಶಾರದ ಸೇವಾಟ್ರಸ್ಟ್ ರೂಪಿಸಿದೆ.
ಈ ದೆಸೆಯಲ್ಲಿ ಟ್ರಸ್ಟ್ ಈ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಪಡಿಸಲು ನಿರ್ಣಯ ಕೈಗೊಂಡಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಶಿಫಾರಿಸಿನನ್ವಯ ಶಿಕ್ಷಣ ಇಲಾಖೆ ಕೂಡ ದತ್ತು ಸ್ವೀಕಾರಕ್ಕೆ ಅನುಮತಿಯನ್ನು ನೀಡಿದೆ.
2025-26ರ ಶಾಲಾ ಶೈಕ್ಷಣಿಕ ವರ್ಷದಿಂದಲೇ ಶಾಲೆಯನ್ನು ದತ್ತು ಸ್ವೀಕರಿಸಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಂದಡಿ ಇಟ್ಟಿದೆ.
ಈ ಶಾಲೆಯಲ್ಲಿ 250 ಮಕ್ಕಳು ಕಲಿಯುತ್ತಿದ್ದಾರೆ. 1954ರ ಆರಂಭಿಕ ಹಂತದಲ್ಲಿ ಉರ್ದುಶಾಲೆಯಾಗಿ ಕಾರ್ಯಗತಗೊಂಡಿತ್ತು. ಬಳಿಕ ಈ ಉರ್ದುಶಾಲೆ ಕಾವಳಕಟ್ಟೆಗೆ ಸ್ಥಳಾಂತರಗೊಂಡಿದ್ದು, ಸ್ಥಳೀಯ ಹಿರಿಯರ ಮುತುವರ್ಜಿಯಿಂದ ಬಳಿಕ ಮೂಡುಪಡುಕೋಡಿ ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ
ಚಾಲ್ತಿಗೆ ಬಂದಿದ್ದು, ಪ್ರಸ್ತುತ ಒಟ್ಟು 250 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
2016-17 ನೇಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 2024-25 ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿಯು ಆರಂಭಗೊಂಡಿದೆ. ಸುಮಾರು 1.65 ಎಕ್ರೆ ವೀಸ್ತಿರ್ಣದ ಜಮೀನನ್ನು ಈ ಶಾಲೆ ಹೊಂದಿದೆ. ಗ್ರಾಮೀಣಭಾಗದಲ್ಲಿರುವ ಶಾಲೆಗಳ ಪೈಕಿ ಮೂಡುಪಡುಕೋಡಿ ಶಾಲೆಯು ಅತೀದೊಡ್ಡ ಶಾಲಾಮೈದಾನವನ್ನು ಹೊಂದಿದೆ. ಈ ಮೈದಾನದಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯುತ್ತಲಿರುತ್ತದೆ.
ಏಳು ಬಸ್‌ಗಳು ಬಂದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ:
ಈ ಶಾಲೆಯ ಸುಮಾರು ಒಂದೂವರೆ ಕಿ.ಮೀ. ಅಸುಪಾಸಿನಲ್ಲಿ ಮೂರು ಖಾಸಗಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯನ್ನು ಹೊಂದಿದ್ದರೆ, ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿ ವಾಮದಪದವು ಮತ್ತು ನಯನಾಡು ಎಂಬಲ್ಲಿ ಸರಕಾರಿ ಪ್ರೌಢ ಶಾಲೆಗಳಿವೆ. ಇದರ ನಡುವೆ ವಿಶೇಷವಾಗಿ ಬಂಟ್ವಾಳ ಅಸುಪಾಸಿನ ವಿವಿಧ ಖಾಸಗಿ ಶಾಲೆಯ 7 ಬಸ್‌ಗಳು ಇರ್ವತ್ತೂರುಪದವು, ಮೂಡುಪಡುಕೋಡಿಗೆ ಬಂದು ವಿದ್ಯಾರ್ಥಿಗಳನ್ನು ಪಿಕಪ್ ಮಾಡಿಕೊಂಡು ಹೋಗುತ್ತದೆ. ಆದರೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಎಲ್ಲಾ ಬೆಳವಣಿಗೆಯ ನಡುವೆ ಮತ್ತು ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳ ಕೊರತೆ ಸಹಿತ ವಿವಿಧ ಕಾರಣಗಳಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವಾಗ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲು ಶಾಲೆಯನ್ನು ದತ್ತು ಸ್ವೀಕರಿಸಿರುವ ಇರ್ವತ್ತೂರು ಶಾರದ ಸೇವಾ ಟ್ರಸ್ಟ್ ಯೋಚಿಸಿದೆ.