
ಕುಕ್ಕೆ: ಕುಮಾರಧಾರೆಯ ಮಲಿನಗೆಳಿಸುತ್ತಿರುವ ಬಟ್ಟೆ ತ್ಯಾಜ್ಯ
ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಬಳಿ ಹರಿಯುತ್ತಿರುವ ಪವಿತ್ರ ನದಿ ಕುಮಾರಧಾರಗೆ ಬಟ್ಟೆ, ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೇ ಕ್ರಮ ಕೈಗೊಂಡರೂ ಸ್ವಚ್ಛತೆ ಮಾತು ಮಾತ್ರ ಮರೀಚಿಕೆಯಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರತಿದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವ ಅವರು ಪುಣ್ಯನದಿ ಕುಮಾರಧಾರದಲ್ಲಿ ಸ್ನಾನ ನೆರವೇರಿಸಿ ಬಳಿಕ ಶ್ರೀ ದೇವರ ದರ್ಶನ ಪಡೆಯುತ್ತಾರೆ. ಆದರೆ ಕೆಲವರು ಮಾತ್ರ ಬಟ್ಟೆಗಳು, ಮಕ್ಕಳ ಪ್ಯಾಡ್ಗಳು ಸೇರಿದಂತೆ ತ್ಯಾಜ್ಯಗಳನ್ನು ನದಿಗೇ ಎಸೆದು ಮಲಿನಗೊಳಿಸುತ್ತಿದ್ದಾರೆ.
ಕುಮಾರಧಾರ ಸ್ನಾನಘಟ್ಟದ ಬಳಿ ಕುಮಾರಧಾರ ನದಿ ಹಾಗೂ ದರ್ಪಣ ತೀರ್ಥ ನದಿಗೆ ಸೇತುವೆ ನಿರ್ಮಿಸಲಾಗಿದ್ದು, ಇದೇ ಸೇತುವೆ ಮೇಲಿನಿಂದ ವಾಹನದಲ್ಲಿ ಬರುವ ಕೆಲವರು ಬಟ್ಟೆ, ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇತ್ತೀಚೆಗೆ ಐಶಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಕಾರನ್ನು ಸೇತುವೆ ಮೇಲೆ ನಿಲ್ಲಿಸಿ ತಮ್ಮಲ್ಲಿದ್ದ ಹಳೆಯ ಬಟ್ಟೆ-ಬರೆಗಳನ್ನು ನದಿಗೆ ಎಸೆದಿದ್ದಾರೆ. ಅಲ್ಲಿದ್ದವರು ತಡೆಯುವ ಪ್ರಯತ್ನ ನಡೆಸಿದರೂ ಇದರಿಂದ ಪ್ರಯೋಜನವಾಗಿಲ್ಲ.
ಇದಕ್ಕೆ ಕಾರಣವಾಗಿ ವಿಚಾರಿಸಿದಾಗ ವ್ಯಕ್ತಿಯೊಬ್ಬ ಹೇಳಿದ್ದು, "ಯಾರೋ ಜ್ಯೋತಿಷಿಯೊಬ್ಬ ಹಳೇ ಬಟ್ಟೆಗಳನ್ನು ನದಿಗೆ ಎಸೆಯಲು" ಹೇಳಿದ್ದರಂತೆ. ಈ ಘಟನೆಗೆ ಸಂಬಂಧಿಸಿದಂತೆ ಆ ವ್ಯಕ್ತಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಮೃತಪಟ್ಟವರ ಬಟ್ಟೆಗಳು ಸೇರಿದಂತೆ ಇತರ ವಸ್ತುಗಳನ್ನು ಪುಣ್ಯ ನದಿಗಳಿಗೆ ಎಸೆಯಲು ತಿಳಿಸುವ ಕೆಲವು ಕಪಟ ಜ್ಯೋತಿಷಿಗಳು ಅಥವಾ ಅರ್ಚಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಘಟನೆಗಳು ಮಳೆಗಾಲದಲ್ಲಿಯೂ ನಡೆಯುತ್ತಿತ್ತು. ಆದರೆ ನೀರಿನ ಹರಿವು ಇರುವ ಕಾರಣ ಅದು ಗೋಚರವಾಗುತ್ತಿರಲಿಲ್ಲ. ಬೇಸಿಗೆಯಿಂದ ನೀರಿನ ಹರಿವು ಕಡಿಮೆಯಾದಾಗ ಇವು ಕಾಣುತ್ತಿವೆ.
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿ ಸ್ವಚ್ಛತಾ ಕೆಲಸ ಮಾಡುವ ವೇಳೆ ನದಿಯಲ್ಲಿ ಲೋಡ್‌ಗಟ್ಟಲೇ ಬಟ್ಟೆ ಬರೆಗಳು, ತ್ಯಾಜ್ಯಗಳು ಲಭಿಸುತ್ತಿವೆ. ಆದರೆ ತೆರವು ಮಾಡಿದ ಬಳಿಕ ಸ್ವಲ್ಪ ದಿನಗಳಲ್ಲಿ ಮತ್ತೆ ಅಷ್ಟೇ ಪ್ರಮಾಣದಲ್ಲಿ ತ್ಯಾಜ್ಯಗಳು ಸಂಗ್ರಹಗೊಂಡಿರುತ್ತವೆ ಎನ್ನುತ್ತಾರೆ ಸ್ವಚ್ಛತಾ ಅಭಿಯಾನದ ಕಾರ್ಯಕರ್ತರು.
ಕುಕ್ಕೆಗೆ ಆಗಮಿಸುವ ಭಕ್ತರಲ್ಲಿ ಕೆಲವರು ಸ್ನಾನಘಟ್ಟದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡದೆ, ಸ್ಥಳೀಯಾಡಳಿತ, ದೇವಳದ ಮಾರ್ಗಸೂಚಿಸಿಗಳನ್ನು ಪಾಲಿಸದೇ ಪರಿಸರ ಹಾಳುಗೆಡವುತ್ತಿದ್ದಾರೆ. ಇದಕ್ಕೆ ಕಟ್ಟು ನಿಟ್ಟಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಜತೆಗೆ ಕುಮಾರಧಾರ ಸೇತುವೆ ಮೇಲಿನಿಂದ ನದಿಗೆ ತ್ಯಾಜ್ಯ ಎಸೆಯದಂತೆ ತಡೆಯಲು ಸೇತುವೆಯ ಎರಡೂ ಬದಿಗಳಲ್ಲಿ ನೆಟ್ ಅಳವಡಿಸಬೇಕು, ಸಿಸಿ ಕ್ಯಾಮರಾ ಅಳವಡಿಸಿ, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.