
ಪಶ್ಚಿಮವಾಹಿನಿ ಯೋಜನೆಯಲ್ಲಿ ಜಿಲ್ಲೆಗೆ ಐನೂರು ಕೋ.ರೂ. ಒದಗಿಸಿ: ಶಾಸಕ ರಾಜೇಶ್ ನಾಯ್ಕ್ ವಿಧಾನಸಭೆಯಲ್ಲಿ ಒತ್ತಾಯ
ಬಂಟ್ವಾಳ: ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ನಯಾಪೈಸೆ ಅನುದಾನ ಬಿಡುಗಡೆಯಾಗದಿದ್ದು, ಅಗತ್ಯದ ಅನೇಕ ಕೆಲಸಗಳು ಬಾಕಿಯಾಗಿರುವ ಹಿನ್ನಲೆಯಲ್ಲಿ ವರ್ಷಕ್ಕೆ ಜಿಲ್ಲೆಗೆ ಐನೂರು ಕೋ.ರೂ.ವನ್ನು ಬಿಡುಗಡೆಗೊಳಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿತ್ತು. ಇದಕ್ಕೆ ಪ್ರತಿಯಾಗಿ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ತಂದಿದ್ದರು.
ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ಮುಂದುವರಿಸಿ ಸಣ್ಣನೀರಾವರಿ ಇಲಾಖೆ ಮೂಲಕ ಸುಮಾರು 1348 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 3,986 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿ, ಪ್ರತಿ ವರ್ಷಕ್ಕೆ 500 ಕೋಟಿ ರೂ.ವಿನಂತೆ ಅನುದಾನ ಒದಗಿಸಿದ್ದರು. ನಂತರ ಬಂದ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ 300 ಕೋಟಿಗಿಂತ ಅಧಿಕ ಅನುದಾನವನ್ನು ಬಿಡುಗಡೆಗೊಳಿಸಿದ್ದರು ಎಂದು ಶಾಸಕ ರಾಜೇಶ್ ನಾಯ್ಕ್ ಸರಕಾರದ ಗಮನಸೆಳೆದರು.
ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ಪ್ರಕೃತಿಯಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಆಗಿರುವಂತ ಬದಲಾವಣೆಗಳನ್ನು ವಿವರಿಸಿದರು. ಆದರೆ ಕಳೆದೆರಡು ವರ್ಷಗಳಿಂದ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಒಂದೇ ಒಂದು ರೂ. ಅನುದಾನ ಬಿಡುಗಡೆಯಾಗಿಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಗಮನಕ್ಕೆ ತಂದರಲ್ಲದೆ ತಾವು ಕೂಡ ಜಿಲ್ಲೆಯವರೇ ಅಗಿರುವುದರಿಂದ ಇದರಿಂದಾಗತ್ತಿರುವ ಸಮಸ್ಯೆಯ ಬಗ್ಗೆ ತಮ್ಮ ಅನುಭವಕ್ಕೆ ಬಂದಿರಬಹುದು, ಸಣ್ಣನೀರಾವರಿ ಇಲಾಖೆಯಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೆ ಬಹಳಷ್ಟು ಅಗತ್ಯದ ಕೆಲಸಗಳು ನಡೆಯದೆ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗಾಗಿ ವರ್ಷಕ್ಕೆ ಐನೂರು ಕೋಟಿ ರೂ. ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಒದಗಿಸಬೇಕು, ಈ ವಿಚಾರದಲ್ಲಿ ತಾವು ಕೂಡ ಬೆಂಬಲಿಸಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.