
ಬೈಕ್ ಅಪಘಾತ: ಗಾಯಾಳು ಯುವ ವಕೀಲ ಮೃತ್ಯು
Monday, March 17, 2025
ಬಂಟ್ವಾಳ: ಕಳೆದ ವಾರ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಅಪಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ (27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಿ.ಸಿ.ರೋಡು ಸಮೀಪದ ಕೈಕುಂಜೆ ನಿವಾಸಿ ವಾಮನ ಎಂಬವರ ಪತ್ರರಾಗಿರುವ ಪ್ರಥಮ್ ಬಿ.ಸಿ.ರೋಡು ನ್ಯಾಯಾಲಯದಲ್ಲಿ ಯುವ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ತನ್ನ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡುವ ಮೂಲಕ ಸಾವಿನಲ್ಲು ಮಾನವೀಯತೆಯನ್ನು ಮೆರೆದಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದ ಅವರು ನೃತ್ಯಪಟುವೂ ಆಗಿದ್ದರು. ಕಳೆದ ನವೆಂಬರ್ ನಲ್ಲಿ ಅವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತರಿಗೆ ತಂದೆ ಮತ್ತು ಸಹೋದರ ಇದ್ದಾರೆ. ಕಳೆದ ವಾರ ಬೊ.ಸಿ.ರೋಡಿನ ವೃತ್ತಬಳಿ ಬೈಕ್ ಡಿವೈಡರ್‌ಗೆ ಢಿಕ್ಕಿಯಾಗಿ ಗಂಭೀರಸ್ವರೂಪದ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.