
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರಿಂದ ಪ್ರತಿಭಟನೆ
ಬಂಟ್ವಾಳ: ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಸರಕಾರವು ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿರುವಂತೆ ಮಾಡಿದಂತೆ 6000 ಸಾ.ರೂ. ವೇತನ ಹೆಚ್ಚಿಸಬೇಕು ಹಾಗೂ ಇನ್ನಿತರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎ.ಐ.ಸಿ.ಸಿ.ಟಿ.ಯು) ವತಿಯಿಂದ ಮಂಗಳವಾರ ಬಿ.ಸಿ. ರೋಡು ಮಿನಿವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ದ.ಕ. ಜಿಲ್ಲಾ ಅದ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ನಮ್ಮ ದೇಶದ ಅಭಿವೃದ್ಧಿಗೆ ಶಿಕ್ಷಣ ಆರೋಗ್ಯ, ಉದ್ಯೋಗ ಹಾಗೂ ಆಹಾರ ಪೂರೈಸಲು ಬೇಕಾದ ಸಂಪನ್ಮೂಲವನ್ನು ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದ್ದು, ಅಕ್ಷರ ದಾಸೋಹ ನೌಕರರಿಗೆ ರಾಜ್ಯದಲ್ಲಿ ಕೆಲಸದ ಒತ್ತಡ ಹೆಚ್ಚಳವಾಗಿದ್ದು, ಇವರ ಕೆಲಸಕ್ಕೆ ತಕ್ಕ ವೇತನ ಮಾತ್ರ ಸಿಗದೇ ನೌಕರರು ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುವಂತೆ ಮಾಡಿದೆ ಎಂದರು.
ಬಿಸಿಯೂಟ ನೌಕರರಿಗೆ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6000 ವೇತನ ಹೆಚ್ಚಳ ಮಾಡಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಎ.ಐ.ಸಿ.ಸಿ.ಟಿ.ಯು ರಾಜ್ಯ ಸಮಿತಿ ಗೌರವಾದ್ಯಕ್ಷ ಮೋಹನ್ ಕೆ.ಇ., ತಾಲೂಕು ಮುಖಂಡರಾದ ರಾಜಾ ಚೆಂಡ್ತಿಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಸಜೇಶ್ ವಿಟ್ಲ, ಸುಲೈಮಾನ್ ಕೆಳಿಂಜ, ಅಕ್ಷರ ದಾಸೋಹ ಸಂಘಟನೆಯ ತಾಲೂಕು ಅಧ್ಯಕ್ಷೆ ಜಯಶ್ರೀ ಆರ್.ಕೆ., ಕಾರ್ಯದರ್ಶಿ ವಾಣಿಶ್ರೀ ಕನ್ಯಾನ, ಉಪಾದ್ಯಕ್ಷರುಗಳಾದ ವಿನಯ ನಡುಮೊಗರು, ಸೇವಂತಿ ಮತ್ತಿತರರು ಭಾಗವಹಿಸಿದ್ದರು.
ಬಳಿಕ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.