
ಕಲಿಕೆಯಲ್ಲಿ ಹಿಂದುಳಿದಿರುವ ನೆಪ: ಇಬ್ಬರು ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಂಚಿತ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಇಬ್ಬರು ವಿದ್ಯಾರ್ಥಿನಿಯರು ಅವಕಾಶ ವಂಚಿತರಾಗಿದ್ದಾರೆ.
ಖಾಸಗಿ ಶಾಲೆಗಳು ಶೇ.100 ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಭತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳಿರರುವಾಗಲೇ ಸರಕಾರಿ ಶಾಲೆಯು ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆದುಕೊಂಡು ಬರುತ್ತಿದ್ದರೂ ಈ ಶೈಕ್ಷಣಿಕ ವರ್ಷದಲ್ಲಿ ಪದ್ಮುಂಜದ ಸರಕಾರಿ ಶಾಲೆಯ ಶಿಕ್ಷಕ ವೃಂದವು ಶೇ.100 ಎಂಬ ಗೀಳಿಗೆ ಬಿದ್ದು ಇಬ್ಬರು ಹೆಣ್ಮಕ್ಕಳನ್ನು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ನೆಪವೊಡ್ಡಿ ಪರೀಕ್ಷೆ ಬರೆಯಲು ಅವಕಾಶ ಕೊಡದೆ ವಂಚಿಸಿರುವುದಾಗಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ಮೊಯ್ದಿನ್ ಕುಟ್ಟಿ ಆರೋಪಿಸಿದ್ದಾರೆ.
ಶಿಕ್ಷಕ ವೃಂದದ ಈ ನಡೆಯು ತೀರಾ ಅಕ್ಷಮ್ಯವಾಗಿದೆ. ತಮಗಾದ ಅನ್ಯಾಯದ ಬಗ್ಗೆ ಹೆಣ್ಮಕ್ಕಳು ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು, ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಹಾಗಾಗಿ ಸಂಬಂಧಪಟ್ಟವರು ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.