
ಕಟೀಲಿನಲ್ಲಿ ‘ಶಿವಾಜಿ’ ಪ್ರಥಮ ಪ್ರದರ್ಶನ, ಅಭೂತಪೂರ್ವ ಸ್ಪಂದನೆ
ಶಿವಾಜಿ ಮಹಾರಾಜರ ಕಥೆಯನ್ನಾಧರಿತ ನಾಟಕ ಪ್ರದರ್ಶನ ಹೆಮ್ಮೆಯ ವಿಚಾರ: ಅನಂತ ಆಸ್ರಣ್ಣ
ಕಟೀಲು: ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿ, ಹಿಂದೂ ಧರ್ಮಕ್ಕೆ ಕೊಡುಗೆ ನೀಡಿದ ಶಿವಾಜಿ ಮಹಾರಾಜರ ಕಥೆಯನ್ನಾಧಾರಿತ ನಾಟಕ ಕಟೀಲಿನಲ್ಲಿ ಪ್ರದರ್ಶನ ಆಗುವುದೆಂದರೆ ಅದು ಹೆಮ್ಮೆಯ ವಿಷಯ ಎಂದು ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಕಟೀಲಮ್ಮನ ಭಕ್ತರ ಸಂಯೋಜನೆಯಲ್ಲಿ ಕಲಾಸಂಗಮ ಮಂಗಳೂರು ಕಲಾವಿದರ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಛತ್ರಪತಿ ಶಿವಾಜಿ’ ನಾಟಕದ ಪ್ರಥಮ ಪ್ರದರ್ಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶಿವಾಜಿ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಮಾತನಾಡಿದರು.
ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ನಮ್ಮ ಕಲಾಸಂಗಮ ತಂಡ ಪ್ರತಿಯೊಂದು ನಾಟಕವನ್ನು ಭಿನ್ನವಾಗಿ ರಂಗಕ್ಕೆ ತರಲಾಗುತ್ತಿದ್ದು ಶಿವಾಜಿ ನಾಟಕ ಕೂಡಾ ವಿಭಿನ್ನ ರಂಗ ವಿನ್ಯಾಸದೊಂದಿಗೆ ತೆರೆಗೆ ಬರುತ್ತಿದೆ. ಹಿಂದಿನ ನಾಟಕದಂತೆ ಈ ನಾಟಕಕ್ಕೆ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ಪ್ರಥಮ ಪ್ರದರ್ಶನ ಕಟೀಲು ದುರ್ಗೆಯ ಸನ್ನಿದಿ ಬಳಿ ನಡೆಯುವುದು ಸಂತಸದ ವಿಷಯ, ಶಶಿರಾಜ್ ಕಾವೂರು ನಾಟಕ ರಚಿಸಿದ್ದು, ಖ್ಯಾತ ನಟ ಪ್ರಥ್ವಿ ಅಂಬರ್ ಶಿವಾಜಿ ಪಾತ್ರಕ್ಕೆ ಧ್ವನಿ ನೀಡಿದ್ದು, ಉತ್ತಮವಾಗಿ ಮೂಡಿ ಬಂದಿದೆ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದರು.
ಈ ಸಂದರ್ಭ ಸದಾನಂದ ಆಸ್ರಣ್ಣ, ಸಾಹಿತಿ ಶಶಿರಾಜ್ ಕಾವೂರು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರನಟ ಪೃಥ್ವಿ ಅಂಬರ್, ಎ.ಕೆ. ವಿಜಯ್ ಕೋಕಿಲ, ಧನಂಜಯ ಶೆಟ್ಟಿಗಾರ್ ದುಬೈ. ಪ್ರಥ್ವಿರಾಜ ಆಚಾರ್ಯ. ಸಿ.ಎ ಚಂದ್ರಶೇಖರ ಶೆಟ್ಟಿ, ದೊಡ್ಡಯ್ಯ ಮೂಲ್ಯ, ಈಶ್ವರ್ ಕಟೀಲು, ಪ್ರದ್ಯುಮ್ನ ರಾವ್ ಅಭಿಲಾಷ್ ಶೆಟ್ಟಿ, ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಶರತ್ ಶೆಟ್ಟಿ ನಿರೂಪಿಸಿದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಶಿವಾಜಿ ನಾಟಕವನ್ನು ವೀಕ್ಷಿಸಿದರು.