
ಮಾನವನ ದುರಾಸೆ ಪರಿಸರ ನಾಶಕ್ಕೆ ಮುಖ್ಯ ಕಾರಣ: ಡಾ. ವಿನಾಯಕ ಕೆ.ಎಸ್.
ಮಂಗಳೂರು: ಮಾನವ ತನ್ನ ಅವಶ್ಯಕತೆಗಳಿಗಾಗಿ ಪರಿಸರವನ್ನು ಅವಲಂಬಿಸಿ ಪ್ರವಾಸೋದ್ಯಮ, ಮನರಂಜನೆ ಸೇರಿದಂತೆ ನಾನಾ ಕಾರಣಗಳಿಗಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಸ್ವಾರ್ಥಕ್ಕಾಗಿ ಪರಿಸರ ಬಳಸಿಕೊಳ್ಳುವುದರಿಂದ ಪರಿಸರದ ಸ್ಥಿತಿ ಹದಗೆಟ್ಟಿದೆ ಎಂದು ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಕೆ.ಎಸ್. ಆತಂಕ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ ವತಿಯಿಂದ ನಡೆದ ಪರಿಸರ ಮತ್ತು ಜೀವವೈವಿಧ್ಯ ಕುರಿತು ವಿಜ್ಞಾನ ಮಾತು ಹಾಗೂ ಪರಿಸರ ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಪಂಚ ಬೆಳೆದಷ್ಟು ಮನೋರಂಜನೆಗಾಗಿ ಪರಿಸರವನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಜನಸಂಖ್ಯೆ ಏರಿಕೆ ಪರಿಸರದಲ್ಲಿ ಹೊಸ ಹೊಸ ರೋಗ, ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ನಾವು ಜಾಗೃತರಾಗದೇ ಇದ್ದಲ್ಲಿ ಪರಿಸರ ಸಂಪೂರ್ಣ ನಾಶವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮಾನವನ ಅನಾವಶ್ಯಕ ಕೃತ್ಯಗಳಿಂದಾಗಿ ಪರಿಸರ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಉಷ್ಣಾಂಶ ಏರಿಕೆ, ಅರಣ್ಯ ನಾಶ, ವಾಯುಮಾಲಿನ್ಯ ಒಂದನ್ನೊಂದು ಅವಲಂಬಿಸಿದ್ದು, ಇವು ಅಸಹಜ ಪ್ರಕ್ರಿಯೆಗಳಾಗಿವೆ. ಪರಿಸ್ಥಿತಿ ಕೈ ಮೀರಿ ಹೋಗಿದ್ದರೂ ಎಲ್ಲವನ್ನು ತಡೆಯುವಷ್ಟು ಸಾಮರ್ಥ್ಯ ನಮಗಿಲ್ಲ. ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಬದಲಾಯಿಸಿಕೊಂಡು ಪರಿಸರ ಹಾನಿ ತಡೆಯುವ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಆಂತರಿಕ ಗುಣಮಟ್ಟ ಖಾತರಿಕೋಶ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್., ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ, ಗ್ರಂಥಾಲಯ ಮುಖ್ಯಸ್ಥೆ ಡಾ. ವನಜ ಉಪಸ್ಥಿತರಿದ್ದರು.