
ಮಹಾನಾಯಕ ಜೈಭೀಮ್ ಟ್ರೋಫಿ-2025’ ಜೈಭೀಮ್ ಕ್ರಿಕೆಟ್ ಹಬ್ಬಕ್ಕೆ ಅದ್ಧೂರಿ ಚಾಲನೆ
ಅಂಬೇಡ್ಕರ್ ಅವರ ತತ್ವ-ಸಿದ್ದಾಂತ, ಆದರ್ಶ ಪಾಲನೆ ಮಾಡೋಣ: ರಾಹುಲ್ ಜಾರಕಿಹೊಳಿ
ಕುಂದಾಪುರ: ಪ.ಜಾತಿ-ಪ.ಪಂಗಡದ ಕ್ರೀಡಾಪಟುಗಳು ಮುಂದೆ ಬರಬೇಕು. ಸಮುದಾಯ ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ದಾಂತ, ಆದರ್ಶ ಪಾಲನೆ ಅಗತ್ಯ. ಬಾಬಾ ಸಾಹೇಬರು ಶಿಕ್ಷಣದ ಮೂಲಕ ವಿಶ್ವದಲ್ಲಿ ಅತ್ಯಮೂಲ್ಯ ಸಂವಿಧಾನವನ್ನು ದೇಶಕ್ಕೆ ನೀಡಲು ಸಾಧ್ಯವಾಗಿದೆ. ಎಸ್ಸಿ-ಎಸ್ಟಿ ಸಮುದಾಯದ ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು. ಕ್ರಿಕೆಟ್ ಪಂದ್ಯಾವಳಿ ಮೂಲಕ ರಾಜ್ಯದ ವಿವಿಧೆಡೆಯಿಂದ ಸಮುದಾಯದ ಮಂದಿಯನ್ನು ಒಗ್ಗೂಡಿಸಿ, ಸಂಘಟಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾಜ ಬಾಂಧವರಿಗಾಗಿ ಜಗದೀಶ್ ಗಂಗೊಳ್ಳಿ ಸಾರಥ್ಯದಲ್ಲಿ 7ನೇ ಬಾರಿಗೆ ನಡೆಸುತ್ತಿರುವ ಅಂತರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಗಲಿನ ಪ್ರತಿಷ್ಟಿತ ಲೀಗ್ ಕಮ್ ನಾಕೌಟ್ ಕ್ರಿಕೆಟ್ ಪಂದ್ಯಾಕೂಟವಾದ ’ಮಹಾನಾಯಕ ಜೈಭೀಮ್’ ಕ್ರಿಕೇಟ್ ಹಬ್ಬ ಕುಂದಾಪುರ ಗಾಂಧಿಮೈದಾನದಲ್ಲಿ 3 ದಿನಗಳ ಕಾಲ ನಡೆಯುತ್ತಿದ್ದು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಉದಯಕುಮಾರ್ ತಲ್ಲೂರು ಮಾತನಾಡಿ, ಡಾ.ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಯಂತೆ ಸಾಮಾಜಿಕ ಪರಿವರ್ತನೆಗಾಗಿ ಹೋರಾಟ ಮಾಡುವ ಜೊತೆಗೆ ಮನೋರಂಜನೆ, ಕ್ರೀಡೆಯನ್ನು ಆಯೋಜಿಸಬೇಕು. ದಲಿತ ಸಮುದಾಯದವರು ಕಲೆ-ಕ್ರೀಡೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದರೂ ಕೂಡ ತಕ್ಕಷ್ಟು ಸಹಾಯ-ಸಹಕಾರ ಸಿಗುತ್ತಿಲ್ಲ ಎಂದರು. ಕ್ರೀಡಾಕೂಟ ಆಯೋಜಿಸಿದ ಬಗ್ಗೆ ಶ್ಲಾಘಿಸಿದರು.
ಚಿಕ್ಕೋಡಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗದ ಅಧ್ಯಕ್ಷ ಜಯಕುಮಾರ್, ಹಾಸನ ಜಿಲ್ಲಾ ವಾಲ್ಮೀಕಿ ನಾಯ್ಕ ಸಂಘದ ಅಧ್ಯಕ್ಷ ಧರ್ಮಪ್ಪ ನಾಯ್ಕ, ಹಾಸನ ವಾಲ್ಮೀಕಿ ಸಮಾಜದ ಮುಖಂಡರಾದ ಶಿವಪ್ಪ ನಾಯ್ಕ, ಮಧು ನಾಯ್ಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ನರಸಿಂಹ ಹಳಗೇರಿ, ರಾಯಲ್ಸ್ ಇಲೆವೆನ್ ತಂಡದ ಸಂಘಟಕ ದಿನೇಶ್ ಎಸ್., ದ.ಸಂ.ಸ. ಭೀಮಘರ್ಜನೆಯ ಕುಂದಾಪುರ ತಾಲೂಕು ಸಂಘಟನಾ ಸಂಚಾಲಕ ವಿಜಯ್ ಕೆ.ಎಸ್., ತಾಲೂಕು ಸಂಚಾಲಕ ಮಂಜುನಾಥ, ಪತ್ರಕರ್ತ ಯೋಗೀಶ್ ಕುಂಭಾಶಿ ಮೊದಲಾದವರು ಇದ್ದರು.
ಪಂದ್ಯಾವಳಿ ಸಂಯೋಜಕ ಜಗದೀಶ್ ಗಂಗೊಳ್ಳಿ ಸ್ವಾಗತಿಸಿದರು. ಶರತ್ ಕುಂಭಾಶಿ ಕಾರ್ಯಕ್ರಮ ನಿರೂಪಿಸಿ, ಫಝಲ್ ಹೊನ್ನಾಳ ವಂದಿಸಿದರು.