
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳ ಭವಿಷ್ಯದ ಜೀವನ ಉಜ್ವಲವಾಗಲಿ: ಬಾಬು ಶೆಟ್ಟಿ ತಗ್ಗರ್ಸೆ
ಕುಂದಾಪುರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಾಂಗಲ್ಯ ಭಾಗ್ಯ ಯೋಜನೆ ಮೂಲಕ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳ ಭವಿಷ್ಯದ ಜೀವನ ಅಮ್ಮನ ಅನುಗ್ರಹದಿಂದ ಉಜ್ವಲವಾಗಿರಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.
ದೇವಾಲಯದ ಸ್ವರ್ಣಮುಖಿ ರಂಗಮಂದಿರದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ‘ಮಾಂಗಲ್ಯ ಭಾಗ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಹಾಗೂ ಅಪೇಕ್ಷಿತರಿಗೆ ಈ ಯೋಜನೆ ಉಪಯೋಗವಾಗಲಿ ಎಂದು ಸಾಕಷ್ಟು ಪ್ರಚಾರ ನಡೆಸಿದ್ದರೂ, ನಿರೀಕ್ಷೆಯಷ್ಟು ಜೋಡಿ ಬಾರದೆ ಇರುವ ಕುರಿತು ಬೇಸರವಿದೆ. ಈ ಕಾರ್ಯಕ್ರಮ ಇನ್ನಷ್ಟು ಜನರಿಗೆ ತಲುಪುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಜಗನ್ಮಾತೆ ಮೂಕಾಂಬಿಕೆ ಸನ್ನಿಧಿಯಲ್ಲಿ ನವಜೀವನ ಆರಂಭಿಸುವ ದಂಪತಿಗಳ ಬಾಳು ಅಭಿವೃದ್ಧಿಯಾಗಲಿ ಎಂದು ಅವರು ಹಾರೈಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ ಆಲೂರು ಮಾತನಾಡಿ, ಇಂದು ದಾಂಪತ್ಯ ಜೀವನ ಆರಂಭಿಸಿರುವ ಜೋಡಿಗಳಲ್ಲಿ ಒಬ್ಬರು ವಿಶೇಷ ಚೇತನರಿದ್ದಾರೆ. ಸರ್ಕಾರದ ಯೋಜನೆಗಳು ನೊಂದವರ ಬಾಳಿನಲ್ಲಿ ಬೆಳಕನ್ನು ತರುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದರು.
ದೇವಳ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ್ ಪೂಜಾರಿ, ಮಹಾಲಿಂಗ ನಾಯ್ಕ್, ಸುಧಾ ಕೆ ಇದ್ದರು.
ಕ್ಷೇತ್ರ ಪುರೋಹಿತ ಗಜಾನನ ಜೋಶಿ ವೇದಘೋಷ ಮಾಡಿದರು, ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು. ಗಣಪತಿ ಭಟ್ ವಂದಿಸಿದರು.
ಸಪ್ತಪದಿ ತುಳಿದ ನಾಲ್ಕು ಜೋಡಿ:
ಕೃಷ್ಣ ಖಾರ್ವಿ ಉಪ್ಪುಂದ ಮತ್ತು ಕಲ್ಪನಾ ಖಾರ್ವಿ ನಾವುಂದ, ಮಂಜುನಾಥ ಖಾರ್ವಿ ಪಾಳ್ಯದವರ ತೊಪ್ಲು ತಾರಪತಿ ಮತ್ತು ಮಧುರಾ ಸರಪುರಹಿತ್ಲು ಬಿಜೂರು, ಆನಂದ ನಾಯ್ಕ್ ಹೆಗ್ಡೆಹಕ್ಲು ಕೊಲ್ಲೂರು ಮತ್ತು ಚಂದ್ರಾವತಿ ನಾಯ್ಕ್ ಖಾರ್ವಿಕೇರಿ ಕುಂದಾಪುರ ಹಾಗೂ ಮಂಜುನಾಥ ಕೋಟೇಶ್ವರ ಮತ್ತು ಅಶ್ವಿತಾ ಮಣೂರು ದಂಪತಿಗಳು ಸಪ್ತಪದಿ ತುಳಿದು ದಾಂಪತ್ಯ ಜೀವನ ಪ್ರವೇಶಿಸಿದರು. 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ, ವಧು-ವರರಿಗೆ ನಗದು, ಬಟ್ಟೆ ಸಹಿತ 75,000 ಮೌಲ್ಯದ ಉಡುಗೊರೆಗಳನ್ನು ದೇವಸ್ಥಾನದ ವತಿಯಿಂದ ನೀಡಲಾಗುತ್ತದೆ. ಮದುವೆ ಹಾಗೂ ಊಟೋಪಚಾರದ ಖರ್ಚು ದೇವಸ್ಥಾನದ ವತಿಯಿಂದಲೇ ನೀಡಲಾಯಿತು.